ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಅನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಬೆಳಿಗ್ಗೆ 10:15ಕ್ಕೆ ಮಂಡಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಹೌದು. ಸಾಮಾನ್ಯವಾಗಿ ಬಜೆಟ್ ಮಂಡನೆಯು ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗುತ್ತದೆ. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು 45 ನಿಮಿಷ ಮೊದಲೇ (10:15 AM) ಬಜೆಟ್ ಮಂಡನೆ ಆರಂಭಿಸಿದ್ದಾರೆ. ಈ ಬದಲಾವಣೆಯ ಹಿಂದೆ ‘ರಾಹುಕಾಲ‘ ತಪ್ಪಿಸುವ ಉದ್ದೇಶವಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಈ ಸಮಯ ಬದಲಾವಣೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೂ ಮುನ್ನ ಸುರೇಶ್ ಕುಮಾರ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಶ್ರೀಸಿದ್ದರಾಮಯ್ಯನವರು ಶುಕ್ರವಾರ ಬೆಳಗ್ಗೆ 10.15 ಗಂಟೆಗೆ ವಿಧಾನಸಭೆಯಲ್ಲಿ ಈ ವರ್ಷದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.10.00 ಗಂಟೆ ಅಲ್ಲ, 10.30 ಗಂಟೆ ಅಲ್ಲ, 11.00 ಗಂಟೆ ಅಲ್ಲ…ಏಕೆ 10.15 ಗಂಟೆಗೆ ಎಂದು ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು…..ಏಕೆಂದರೆ ಶುಕ್ರವಾರ, ಬೆ.10. 30 ಗಂಟೆಯಿಂದ ರಾಹುಕಾಲ! ಬೆಳಗ್ಗೆ 7.30 ಗಂಟೆ ಯಿಂದ 9. 00 ಗಂಟೆಯವರೆಗೂ ಗುಳಿಕಾಲ ಎಂದು ಪೋಸ್ಟ್ ಮಾಡಿದ್ದಾರೆ.


