HomeLatest Newsಕರ್ನಾಟಕ ವಿಧಾನ ಮಂಡಲದಲ್ಲಿ MLA/ MLC ಗಳು ಪಾಲಿಸಬೇಕಾದ ನಿಯಮಗಳೇನು : ಇಲ್ಲಿದೆ ಸಂಪೂರ್ಣ ಮಾಹಿತಿ.!

ಕರ್ನಾಟಕ ವಿಧಾನ ಮಂಡಲದಲ್ಲಿ MLA/ MLC ಗಳು ಪಾಲಿಸಬೇಕಾದ ನಿಯಮಗಳೇನು : ಇಲ್ಲಿದೆ ಸಂಪೂರ್ಣ ಮಾಹಿತಿ.!

ಬೆಂಗಳೂರು :   ಕರ್ನಾಟಕ ವಿಧಾನ ಮಂಡಲದಲ್ಲಿ (ವಿಧಾನಸಭೆ ಮತ್ತು ವಿಧಾನಪರಿಷತ್) ಶಾಸಕರು (MLA) ಮತ್ತು ಸದಸ್ಯರು (MLC) ಪಾಲಿಸಬೇಕಾದ ನಿಯಮಗಳು ಮತ್ತು ಸಂಸದೀಯ ನಡವಳಿಕೆಗಳು ಅತ್ಯಂತ ಪ್ರಮುಖವಾಗಿವೆ. ಇವುಗಳನ್ನು “ಸಂಸದೀಯ ನಡವಳಿಕೆ ಮತ್ತು ಶಿಷ್ಟಾಚಾರ” ಎಂದು ಕರೆಯಲಾಗುತ್ತದೆ. ಸದನವನ್ನು ಪ್ರವೇಶಿಸುವಾಗ ಅಥವಾ ನಿರ್ಗಮಿಸುವಾಗ ಶಾಸಕರು ಸಭಾಧ್ಯಕ್ಷರ ಪೀಠಕ್ಕೆ (Speaker’s Chair) ನಮಸ್ಕರಿಸುವ ಮೂಲಕ ಗೌರವ ಸಲ್ಲಿಸಬೇಕು. ಸಭಾಧ್ಯಕ್ಷರು ಮಾತನಾಡಲು ಎದ್ದು ನಿಂತಾಗ, ಎಲ್ಲಾ ಸದಸ್ಯರು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳಬೇಕು ಮತ್ತು ಮೌನವಾಗಿರಬೇಕು .

ಸದನದಲ್ಲಿ ಉಪಸ್ಥಿತರಿದ್ದಾಗ ಸದಸ್ಯರು ಪಾಲಿಸಬೇಕಾದ ನಿಯಮಗಳು:  ಸಭೆಯ ಉಪವೇಶನದಲ್ಲಿ ಸದಸ್ಯನು ;

(1) ಸದನದ ಕಾರ್ಯಕಲಾಪಕ್ಕೆ ಸಂಬಂಧಿಸಿರುವುದನ್ನು ಹೊರತು, ಯಾವುದೇ ಪುಸ್ತಕ, ವಾರ್ತಾ ಪತ್ರಿಕೆ ಅಥವಾ ಕಾಗದವನ್ನು ಓದತಕ್ಕುದಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

(2) ಯಾವನೇ ಸದಸ್ಯನು ಮಾತನಾಡುತ್ತಿರುವಾಗ ಅವನಿಗೆ ದುರ್ವಚನೆಗಳಿಂದ ಅಥವಾ ಏರುಸ್ವರದಿಂದ ಅಥವಾ ಇತರ ಯಾವುದೇ ಕ್ರಮಬಾಹಿರ ರೀತಿಯಲ್ಲಿ ತೊಂದರೆಯುಂಟು ಮಾಡತಕ್ಕುದಲ್ಲ.

(3) ಸದನವನ್ನು ಪ್ರವೇಶಿಸುವಾಗ ಅಥವಾ ಅಲ್ಲಿಂದ ನಿರ್ಗಮಿಸುವಾಗ ಮತ್ತು ತಮ್ಮ ಜಾಗದಲ್ಲಿ ಕುಳಿತುಕೊಳ್ಳುವಾಗ ಅಥವಾ ಜಾಗವನ್ನು ಬಿಡುವಾಗ ಸಭಾಧ್ಯಕ್ಷರಿಗೆ ವಂದಿಸತಕ್ಕದ್ದು.

(4) ಸಭಾಧ್ಯಕ್ಷರ ಮತ್ತು ಮಾತನಾಡುತ್ತಿರುವ ಸದಸ್ಯರ ಮಧ್ಯೆ ಹಾದು ಹೋಗತಕ್ಕುದಲ್ಲ ;

(5) ಸಭಾಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವಾಗ ಸದನವನ್ನು ತ್ಯಜಿಸತಕ್ಕುದಲ್ಲ.

(6) ಯಾವಾಗಲೂ ಸಭಾಧ್ಯಕ್ಷರನ್ನು ಸಂಬೋಧಿಸಿ ಮಾತನಾಡತಕ್ಕುದು.

(7) ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ತನ್ನ ಸ್ಥಾನದಲ್ಲಿರತಕ್ಕುದು.

(8) ಸದನದಲ್ಲಿ ಮಾತನಾಡದೇ ಇರುವ ಸಮಯದಲ್ಲಿ ನಿಶ್ಯಬ್ದವಾಗಿರತಕ್ಕುದು.

(9) ಸಭೆಯ ಕಾರ್ಯವಿಧಿಗೆ ತಡೆ ಅಥವಾ ವಿಘ್ನವನ್ನು ತರತಕ್ಕುದಲ್ಲ ಮತ್ತು ಸದನದಲ್ಲಿ ಭಾಷಣವಾಗುತ್ತಿರುವಾಗ ವೀಕ್ಷಕ ವಿವರಣೆಯನ್ನು ಮಾಡತಕ್ಕುದಲ್ಲ.

(10) ಯಾವುದೇ ಉಪ್ಪರಿಗೆಯ ಮೊಗಸಾಲೆಯನ್ನು (ಗ್ಯಾಲರಿಯನ್ನು) ಒಬ್ಬ ಅಪರಿಚಿತನು ಪ್ರವೇಶಿಸಿದಾಗ ಚಪ್ಪಾಳೆ ಹೊಡೆಯತಕ್ಕುದಲ್ಲ.

(11) ಮಾತನಾಡುತ್ತಿರುವಾಗ, ಯಾವುದೇ ಉಪ್ಪರಿಗೆಯ ಮೊಗಸಾಲೆಯಲ್ಲಿರುವ (ಗ್ಯಾಲರಿಯಲ್ಲಿ) ಅಪರಿಚಿತರನ್ನು ಕುರಿತು ಮಾತನಾಡತಕ್ಕುದಲ್ಲ.

(12) ಸದನದಲ್ಲಿ ಘೋಷಣೆಯನ್ನು ಕೂಗತಕ್ಕುದಲ್ಲ ;

(13) ಪೀಠಕ್ಕೆ ಬೆನ್ನು ತೋರಿಸುವಂತೆ ಕುಳಿತುಕೊಳ್ಳತಕ್ಕುದಲ್ಲ ಅಥವಾ ನಿಲ್ಲತಕ್ಕುದಲ್ಲ.

(14) ಸದನದಲ್ಲಿ ಪೀಠದ ಬಳಿ ಖುದ್ದಾಗಿ ಹೋಗತಕ್ಕುದಲ್ಲ, ಅವಶ್ಯಕತೆಯುಂಟಾದರೆ ಅವರು ವಿಧಾನಮಂಡಲದ ಅಧಿಕಾರಿಗಳಿಗೆ ಚೀಟಿ ನೀಡಬಹುದು.

(15) ಸದನದಲ್ಲಿ ಬ್ಯಾಡ್ಡುಗಳು ಅಥವಾ ಯಾವುದೇ ವಸ್ತುವನ್ನು ಧರಿಸತಕ್ಕುದಲ್ಲ ಅಥವಾ ಪ್ರದರ್ಶಿಸತಕ್ಕುದಲ್ಲ.

(16) ಸದನದಲ್ಲಿ ಶಸ್ತ್ರಗಳನ್ನು ತರತಕ್ಕುದಲ್ಲ ಅಥವಾ ಪ್ರದರ್ಶಿಸತಕ್ಕುದಲ್ಲ.

(17) ಸದನದಲ್ಲಿ ಬಾವುಟಗಳು, ಲಾಂಛನಗಳು ಅಥವಾ ಯಾವುದೇ ನಿಶಾನೆಗಳನ್ನು ಪ್ರದರ್ಶಿಸತಕ್ಕುದಲ್ಲ.

(18) ತನ್ನ ಭಾಷಣವಾದ ತರುವಾಯ, ಕೂಡಲೇ ಸದನವನ್ನು ಬಿಟ್ಟು ಹೋಗತಕ್ಕುದಲ್ಲ.

(19) ಸದನದ ವ್ಯವಹಾರಗಳಿಗೆ ಸಂಬಂಧಪಡದ ಯಾವುದೇ ಬರವಣಿಗೆ, ಪ್ರಶ್ನಾವಳಿ, ಕರಪತ್ರಗಳು, ಪತ್ರಿಕಾ ಹೇಳಿಕೆಗಳು, ಕಾಗದದ ಹಾಳೆಗಳು, ಮೊದಲಾದುವನ್ನು ಸದನದ ಆವರಣದೊಳಗೆ ಹಂಚತಕ್ಕುದಲ್ಲ.

(20) ಸದನದಲ್ಲಿ ಡೆಸ್ಕ್ ಮೇಲೆ ತನ್ನ ಟೋಪಿಯನ್ನು ಇಡತಕ್ಕುದಲ್ಲ, ಕಡತಗಳನ್ನು ಇಡಲು ಅಥವಾ ಬರೆಯುವ ಉದ್ದೇಶಕ್ಕಾಗಿ ರಟ್ಟನ್ನು ತರತಕ್ಕುದಲ್ಲ, ಧೂಮಪಾನ ಮಾಡತಕ್ಕುದಲ್ಲ ಅಥವಾ ಕೋಟನ್ನು ಕೈನಲ್ಲಿ ಹಿಡಿದು ಸದನವನ್ನು ಪ್ರವೇಶಿಸಿತಕ್ಕುದಲ್ಲ.

(21) ಆರೋಗ್ಯದ ಕಾರಣಗಳ ಮೇಲೆ ವಿಧಾನ ಸಭ್ಯಾಧ್ಯಕ್ಷರ ಅನುಮತಿ ಪಡೆಯದೆ ಊರುಗೋಲನ್ನು ತರತಕ್ಕುದಲ್ಲ.

(22) ಸದನದಲ್ಲಿ ಪ್ರತಿಭಟನೆ ಸೂಚಿಸಿ ಕಾಗದ ಪತ್ರಗಳನ್ನು ಹರಿದುಹಾಕತಕ್ಕುದಲ್ಲ;

(23) ಸದನದಲ್ಲಿ ಕ್ಯಾಸೆಟ್ ಅಥವಾ ಟೇಪ್ ರೆಕಾರ್ಡ‌್ರಗಳನ್ನು ತರತಕ್ಕುದಲ್ಲ ಮತ್ತು ಹಾಕತಕ್ಕುದಲ್ಲ ಮತ್ತು

(24) ಸದನಕ್ಕೆ ಜೋರಾಗಿ ಕೇಳಿಸುವಂತೆ ಮೊಗಸಾಲೆಯಲ್ಲಿ ಮಾತನಾಡತಕ್ಕುದಲ್ಲ ಅಥವಾ ನಗತಕ್ಕುದಲ್ಲ.

325. ಸಭಾಧ್ಯಕ್ಷರಿಂದ ಕರೆಬಂದಾಗ ಸದಸ್ಯರು ಮಾತನಾಡುವುದು : ಒಬ್ಬ ಸದಸ್ಯನು ಮಾತನಾಡಲು ಎದ್ದುನಿಂತರೆ, ಸಭಾಧ್ಯಕ್ಷರು ಅವರ ಹೆಸರನ್ನು ಕರೆಯತಕ್ಕುದು. ಒಬ್ಬರಿಗಿಂತ ಹೆಚ್ಚು ಸದಸ್ಯರು ಏಕಕಾಲದಲ್ಲಿ ಎದ್ದು ನಿಂತರೆ, ಸಭಾಧ್ಯಕ್ಷರು ಹೆಸರು ಕರೆದಿರುವ ಸದಸ್ಯರಿಗೆ ಮಾತನಾಡಲು ಹಕ್ಕಿರುವುದು.

326. ಸದನವನ್ನು ಉದ್ದೇಶಿಸಿ ಮಾತನಾಡುವ ರೀತಿ : ಸದನದಲ್ಲಿ ಯಾವುದೇ ವಿಷಯದ ಬಗ್ಗೆ ಒಬ್ಬ ಸದಸ್ಯನು ಯಾವುದೇ ಅಭಿಪ್ರಾಯವನ್ನು ವ್ಯಕ್ತಗೊಳಿಸಲಿಚ್ಛಿಸಿದರೆ, ತನ್ನ ಸ್ಥಳದಿಂದಲೇ ಎದ್ದುನಿಂತು ಸಭಾಧ್ಯಕ್ಷರನ್ನು ಸಂಬೋಧಿಸಿ. ಮಾತನಾಡತಕ್ಕುದು, ಪರಂತು, ಕಾಯಿಲೆ ಅಥವಾ ದುರ್ಬಲತೆಯಿಂದ ನಿಶ್ಯಕ್ತರಾಗಿರುವವರನ್ನು ಕುಳಿತುಕೊಂಡೆ ಮಾತನಾಡಲು ಅನುಮತಿಸಬಹುದು.

* ಮಾತನಾಡುವಾಗ ಪಾಲಿಸಬೇಕಾದ ನಿಯಮಗಳು : ಸದಸ್ಯರು ಮಾತನಾಡುವಾಗ

(1) ನ್ಯಾಯಾಲಯದಲ್ಲಿ ಇತ್ಯರ್ಥದಲ್ಲಿದ್ದು ತೀರ್ಪು ನೀಡಿರದ ಯಾವುದೇ ಸಂಗತಿಯನ್ನು ಕುರಿತು ಮಾತನಾಡತಕ್ಕುದಲ್ಲ.

(2) ಸದಸ್ಯರೊಬ್ಬರ ಮೇಲೆ ವೈಯಕ್ತಿಕ ದೋಷಾರೋಪಣೆ ಮಾಡತಕ್ಕುದಲ್ಲ.

(3) ಸಂಸತ್ತು ಅಥವಾ ಯಾವುದೇ ರಾಜ್ಯ ವಿಧಾನಮಂಡಲದ ವ್ಯವಹರಣೆಗಳು ಮತ್ತು ನಡವಳಿಕೆಗಳನ್ನು ಕುರಿತು ಹೀನಾಯವಾಗಿ ಮಾತನಾಡತಕ್ಕುದಲ್ಲ.

(4) ಸದನದ ಯಾವುದೇ ತೀರ್ಮಾನವನ್ನು ಕುರಿತು ಅದನ್ನು ರದ್ದುಪಡಿಸಲು ಪ್ರಸ್ತಾವ ಮಂಡಿಸುವಾಗ ಹೊರತು ಇನ್ನಾವುದೇ ಆರೋಪಣೆ ಮಾಡತಕ್ಕುದಲ್ಲ.

(5) ಸರಿಯಾದ ವಾಕ್ಯಗಳಲ್ಲಿ ರಚಿಸಲಾದ ಆಧಾರಸಹಿತ ಪ್ರಸ್ತಾವದ ಮೇಲೆ ಚರ್ಚೆ ನಡೆಸಿದ್ದ ಹೊರತು ಉನ್ನತಾಧಿಕಾರದಲ್ಲಿರುವ ವ್ಯಕ್ತಿಗಳ ನಡವಳಿಕೆ ಕುರಿತು ಆರೋಪಿಸತಕ್ಕುದಲ್ಲ.

ವಿವರಣೆ : ಉನ್ನತಾಧಿಕಾರದಲ್ಲಿರುವ ವ್ಯಕ್ತಿಗಳು ಎಂದರೆ ಭಾರತ

ಸಂವಿಧಾನದ ಮೇರೆಗೆ ಯಾವ ನಡವಳಿಕೆಯನ್ನು ಸರಿಯಾದ ವಾಕ್ಯಗಳಲ್ಲಿ ರಚಿಸಿದ ಆಧಾರಸಹಿತ ಪ್ರಸ್ತಾವಗಳ ಮೇಲೆ ಮಾತ್ರವೇ ಚರ್ಚೆ ನಡೆಸಬಹುದೋ ಆ ವ್ಯಕ್ತಿಗಳು ಅಥವಾ ಯಾರ ನಡವಳಿಕೆಯನ್ನು ತಾವು ಒಪ್ಪುವಂತಹ ವಾಕ್ಯಗಳಲ್ಲಿ ರಚಿಸಲಾದ ಆಧಾರಸಹಿತ ಪ್ರಸ್ತಾವದ ಮೇಲೆ ಮಾತ್ರವೇ ಚರ್ಚಿಸತಕ್ಕುದು ಎಂದು ಸಭಾಧ್ಯಕ್ಷರು ಅಭಿಪ್ರಾಯಪಡುತ್ತಾರೋ ಆ ವ್ಯಕ್ತಿಗಳು ;

(6) ಚರ್ಚೆಯ ಮೇಲೆ ಪ್ರಭಾವ ಬೀರುವುದಕ್ಕಾಗಿ ರಾಜ್ಯಪಾಲರ ಹೆಸರನ್ನು ಉಪಯೋಗಿಸತಕ್ಕುದಲ್ಲ ;

(7) ರಾಷ್ಟ್ರದ್ರೋಹ, ರಾಷ್ಟ್ರವಿರೋಧಿ ಅಥವಾ ಅಪಮಾನಕರವಾದ ಮಾತುಗಳನ್ನು ಆಡತಕ್ಕುದಲ್ಲ.

(8) ಸದನದ ಕಾರ್ಯಕಲಾಪಗಳನ್ನು ಅಡ್ಡಿಪಡಿಸುವುದಕ್ಕಾಗಿ ತಮ್ಮ ವಾಕ್ ಸ್ವಾತಂತ್ರವನ್ನು ಬಳಸಬಾರದು.

(9) ವಿಧಾನ ಸಭಾಧ್ಯಕ್ಷರ ಪರ ಅಥವಾ ವಿಧಾನಮಂಡಲ ಕಾರ್ಯಾಲಯದ ಯಾವುದೇ ಉದ್ದೇಶವನ್ನು ಕುರಿತು ಆರೋಪಿಸತಕ್ಕುದಲ್ಲ.

(10) ರಾಷ್ಟ್ರಾಧ್ಯಕ್ಷರು ಅಥವಾ ರಾಜ್ಯಪಾಲರ ಅಥವಾ ಯಾವುದೇ ನ್ಯಾಯಾಲಯದ ನಡವಳಿಯನ್ನು ಕುರಿತು ಆರೋಪಿಸತಕ್ಕುದಲ್ಲ ಅಥವಾ ಚರ್ಚೆಯನ್ನು ಪರಿಣಾಮಕಾರಿಯಾಗಿ ಮಾಡುವ ಉದ್ದೇಶಕ್ಕಾಗಿ ರಾಜ್ಯಪಾಲರ ಅಥವಾ ರಾಷ್ಟ್ರಾಧ್ಯಕ್ಷರ ಹೆಸರನ್ನು ಬಳಸತಕ್ಕುದಲ್ಲ

(11) ಯಾವುದೇ ಗ್ಯಾಲರಿಯಲ್ಲಿರುವ ಅಪರಿಚಿತರ ಬಗ್ಗೆ ಯಾವುದೇ ಉಲ್ಲೇಖ ಮಾಡತಕ್ಕುದಲ್ಲ ;

(12) ಸರ್ಕಾರಿ ಅಧಿಕಾರಿಗಳನ್ನು ಹೆಸರು ಹಿಡಿದು ಕರೆಯತಕ್ಕುದಲ್ಲ ; ಮತ್ತು

(13) ಪೀಠದ ಪೂರ್ವಾನುಮತಿಯ ಹೊರತು ಬರವಣಿಗೆಯಲ್ಲಿರುವ ಭಾಷಣವನ್ನು ಓದತಕ್ಕುದಲ್ಲ ;

* ಒಬ್ಬ ವ್ಯಕ್ತಿಯನ್ನು ಕುರಿತು ಆಪಾದನೆಯ ಬಗ್ಗೆ ಕೈಗೊಳ್ಳಬೇಕಾದ ಕಾರ್ಯವಿಧಾನ : ಸದಸ್ಯರು ಸಭಾಧ್ಯಕ್ಷರಿಗೆ ಮತ್ತು ಸಂಬಂಧಪಟ್ಟ ಮಂತ್ರಿಗಳಿಗೆ, ಮಂತ್ರಿಗಳು ಉತ್ತರ ನೀಡುವ ಉದ್ದೇಶಕ್ಕಾಗಿ ತನಿಖೆ ನಡೆಸಲು ಸಾಧ್ಯವಾಗುವಂತೆ ಪೂರ್ವಮಾಹಿತಿಯನ್ನು ಕೊಟ್ಟಿದ್ದ ಹೊರತು, ಯಾವ ಸದಸ್ಯರು ಯಾವ ವ್ಯಕ್ತಿಯನ್ನು ಕುರಿತು ಅಪಮಾನಕರವಾದ ಅಥವಾ ಅಪರಾಧದ ಆಪಾದನೆ ಮಾಡುವ ಯಾವ ಆರೋಪವನ್ನು ಮಾಡತಕ್ಕುದಲ್ಲ, ಅಲ್ಲದೆ ಸಭಾಧ್ಯಕ್ಷರು ಅಂಥ ಆರೋಪವು ಸದನದ ಮರ್ಯಾದೆಗೆ ಕುಂದು ತರುವಂತಹದು ಅಥವಾ ಅದರಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಸಾಧಿತವಾಗುವುದಿಲ್ಲ ಎಂದು ಅಭಿಪ್ರಾಯ ಪಡುವುದಾದರೆ, ಯಾವುದೇ ಸಂದರ್ಭದಲ್ಲಿ ಯಾರೇ ಸದಸ್ಯರು ಅಂಥ ಯಾವುದೇ ಆರೋಪ ಮಾಡುವುದನ್ನು ನಿಷೇಧಿಸಬಹುದು.

329. ಪರಿಷತ್ತಿನಲ್ಲಿ ಮಾಡಲಾದ ಭಾಷಣಗಳನ್ನು ಉದ್ಧರಿಸುವುದಕ್ಕೆ ಪ್ರತಿಬಂಧ: ಪರಿಷತ್ತಿನಲ್ಲಿ ಮಾಡಲಾದ ಯಾವುದೇ ಭಾಷಣವನ್ನು ಅದು ಒಂದು ಕಾರ್ಯನೀತಿಯ ಬಗ್ಗೆ ಸಚಿವರ ಸ್ಪಷ್ಟ ಹೇಳಿಕೆಯಾಗಿದ್ದ ಹೊರತು ಸದನದಲ್ಲಿ ಉದ್ಧರಿಸತಕ್ಕುದಲ್ಲ.

ಆದರೂ, ಸಭಾಧ್ಯಕ್ಷರು ತಮಗೆ ಮುಂಚಿತವಾಗಿ ಸಲ್ಲಿಸಿದ ಕೋರಿಕೆಯ ಮೇಲೆ ಯಾರೇ ಸದಸ್ಯರಿಗೆ ಪರಿಷತ್ತಿನಲ್ಲಿನ ಭಾಷಣಗಳನ್ನು ಉದ್ಧರಿಸಲು ಅಥವಾ ಅಲ್ಲಿನ ಕಾರ್ಯವಿಧಾನವನ್ನು ಕುರಿತು ಉಲ್ಲೇಖಿಸಲು, ಹಾಗೆ ಮಾಡುವುದು ಆ ಸದಸ್ಯರು ಹಕ್ಕು ಬಾಧ್ಯತೆಯ ಅಥವಾ ಕಾರ್ಯವಿಧಾನದ ಅಂಶವೊಂದನ್ನು ವಿಶದೀಕರಿಸಲು ಅವಶ್ಯವೆಂದು ಸಭಾಧ್ಯಕ್ಷರು ಯೋಚಿಸಿದಲ್ಲಿ, ಅನುಮತಿ ನೀಡಬಹುದು.

* ಪ್ರಶ್ನೆಗಳನ್ನು ಸಭಾಧ್ಯಕ್ಷರ ಮುಖಾಂತರವಾಗಿ ಕೇಳತಕ್ಕುದು : ಚರ್ಚೆ ನಡೆಯುತ್ತಿರುವಾಗ ವಿವರಣೆ ಉದ್ದೇಶಗಳಿಗಾಗಿ ಅಥವಾ ಇನ್ನಾವುದೇ ಸಾಕಷ್ಟು ಕಾರಣಗಳಿಗಾಗಿ ಸದನದಲ್ಲಿ ಆಗ ಪಾಲೋಚನೆಯಲ್ಲಿರುವ ಯಾವುದೇ ವಿಷಯದ ಸಂಬಂಧದಲ್ಲಿ ಯಾವುದೇ ಸದಸ್ಯರು ಇನ್ನೊಬ್ಬ ಸದಸ್ಯರಿಗೆ ಪ್ರಶ್ನೆಯನ್ನು ಕೇಳುವ ಅಗತ್ಯವುಂಟಾದರೆ, ಅವರು ತಮ್ಮ ಪ್ರಶ್ನೆಯನ್ನು ಸಭಾಧ್ಯಕ್ಷರ ಮೂಲಕ ಕೇಳತಕ್ಕುದು.

* ಅಸಂಬಂಧಿತ ಅಥವಾ ಪುನರುಕ್ತಿ : ಅಸಂಬಂಧ ವಿಷಯಗಳನ್ನು ಪ್ರಸ್ತಾಪಿಸುವ ಅಥವಾ ತನ್ನ ವಾದವನ್ನು ಅಥವಾ ಸದಸ್ಯರ ವಾದಗಳನ್ನು ಬೇಸರ ಮಾಡುವಷ್ಟು ಪುನಃ ಪುನಃ ಹೇಳುತ್ತಲೇ ಇರುವ ಸದಸ್ಯರೊಬ್ಬರ ವರ್ತನೆಯನ್ನು ಸದನದ ಗಮನಕ್ಕೆ ತಂದನಂತರ ಸಭಾಧ್ಯಕ್ಷರು ಆ ಸದಸ್ಯರನ್ನು ತಮ್ಮ ಭಾಷಣವನ್ನು ನಿಲ್ಲಿಸಬೇಕೆಂದು ನಿರ್ದೇಶಿಸಬಹುದು.

* ವೈಯಕ್ತಿಕ ವಿವರಣೆಗಳು : ಸದಸ್ಯರು ಸಭಾಧ್ಯಕ್ಷರ ಅನುಮತಿ ಪಡೆದು ಒಂದು ವಿಷಯವು ಸದನದ ಮುಂದೆ ಚರ್ಚೆಗೆ ಬಂದಿರದಿದ್ದರೂ ಆ ಬಗ್ಗೆ ತಮ್ಮ ವೈಯುಕ್ತಿಕ ವಿವರಣೆಯನ್ನು ನೀಡಬಹುದು, ಆದರೆ ಹಾಗೆ ಮಾಡುವಾಗ ಯಾವುದೇ ಚರ್ಚಾಸ್ಪದ ಅಂಶವನ್ನು ತರತಕ್ಕುದಲ್ಲ ಮತ್ತು ಆ ಬಗ್ಗೆ ಯಾವ ಚರ್ಚೆಗೂ ಅವಕಾಶ ನೀಡತಕ್ಕುದಲ್ಲ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular