ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಹಾಗೂ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ, ತಮ್ಮದೇ ಶೈಲಿಯಲ್ಲಿ ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಅದೇ ರೀತಿ ಮುಂದೆ ದೇಶಾದ್ಯಂತ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕರ್ನಾಟಕ ಮಾಡೆಲ್ ಅಂತ ಅಪಕೀರ್ತಿಗೆ ಕಾರಣವಾಗುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜಣ್ಣ, ಸ್ಟಿಂಗ್ ಆಪರೇಷನ್ ಪ್ರಕರಣದಿಂದ ಕರ್ನಾಟಕದ ಗೌರವಕ್ಕೆ ಧಕ್ಕೆಯಾಗಲಿದ್ದು, ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಸ್ಟಿಂಗ್ ಆಪರೇಷನ್ನಿಂದ ಪಕ್ಷದ ಮೇಲಾಗುತ್ತಿರುವ ಪರಿಣಾಮಗಳು, ವೈಯಕ್ತಿಕ ವರ್ಚಸ್ಸಿನ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರೊಂದಿಗೆ ವಿವರವಾಗಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಉನ್ನತ ಮಟ್ಟದಲ್ಲಾಗಲಿ ಅಥವಾ ಕೆಳಮಟ್ಟದಲ್ಲಾಗಲಿ, ಸೂಕ್ತ ತನಿಖೆ ನಡೆದು ಸತ್ಯ ಹೊರಬರಬೇಕು. ಈ ಪ್ರಕರಣದಲ್ಲಿ ನಿರಪರಾಧಿಗಳನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದರೆ ಅವರಿಗೆ ನ್ಯಾಯ ಸಿಗಬೇಕು. ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಮಾಡೆಲ್ ಎಂಬ ಪದ ಬಳಕೆಯಾಗುವಂತೆ, ಮುಂದಿನ ದಿನಗಳಲ್ಲಿ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕರ್ನಾಟಕ ಮಾಡೆಲ್ ಎಂಬ ಅಪಕೀರ್ತಿ ಬರಬಹುದು. ಇದು ರಾಜ್ಯಕ್ಕೆ ದೊಡ್ಡ ಕಳಂಕ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಸೂಕ್ತ ತನಿಖೆ ನಡೆಸುವುದು ಅಗತ್ಯ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ನಿಲುವುಗಳ ಕುರಿತು ಜನರಲ್ಲಿ ಗೊಂದಲವಿದೆ ಎಂದು ರಾಜಣ್ಣ ಅಭಿಪ್ರಾಯಪಟ್ಟರು. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಬಳಿಕ ಚುನಾವಣಾ ಪ್ರಚಾರಕ್ಕೂ ಹೋಗುವುದಿಲ್ಲ ಎಂದು ಹೇಳಿರುವುದು ಪಕ್ಷದ ಮೇಲೆ ದುಷ್ಪರಿಣಾಮ ಬೀರಲಿದೆ. ಸ್ಟಿಂಗ್ ಪ್ರಕರಣದ ವಿಚಾರ ಹೀಗೆ ಮುಂದುವರೆದರೆ ಮುಂಬರು ಚುನಾವಣೆಯಲ್ಲಿ ಪ್ರಚಾರಕ್ಕೂ ಹೋಗಲ್ಲ ಎಂದು ರಾಹುಲ್ ಗಾಅಂಧಿ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೆಲ್ಲವೂ ಪಕ್ಷದ ಮೇಲೆ ಪರಿಣಾಮ ಬೀರಲಿದೆ. 2028ರ ಚುನಾವಣೆಯ ನಾಯಕತ್ವದ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯವಿದೆ ಎಂದರು.
ಸ್ಟಿಂಗ್ ಆಪರೇಷನ್ ವಿಚಾರದ ಪರಿಣಾಮ ಪರಿಷತ್ ಚುನಾವಣೆಯ ಮೇಲೂ ಬೀರಿದೆ. ವಿದ್ಯಾವಂತ ಮತದಾರರು ಪ್ರತಿಯೊಂದು ವಿಚಾರವನ್ನೂ ವಿಶ್ಲೇಷಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ಅವರಿಗೆ ಅವಕಾಶವಿದೆ. ತುಮಕೂರು ಕ್ಷೇತ್ರದಲ್ಲಿ 35 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ನ 26 ಶಾಸಕರಿದ್ದರೂ ಸೋಲು ಅನುಭವಿಸಿರುವುದು ಪಕ್ಷಕ್ಕೆ ಮುಖಭಂಗವಾಗಿದೆ ಎಂದು ತಿಳಿಸಿದರು.
ಸೋಲಿನ ಜವಬ್ದಾರಿ ಹೊತ್ತು ನನ್ನನ್ನೂ ಸೇರಿ ಕಾಂಗ್ರೆಸ್ನವರು ನಾವೆಲ್ಲ ರಾಜೀನಾಮೆ ಕೊಡಬೇಕು. ನಾವು ಗೆಲ್ಲಲು ಆಗಿಲ್ಲ ಅಂದ್ರೆ 26 ಜನವೂ ಕೂಡ ನಾವು ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು. ಪಕ್ಷದಲ್ಲಿ ಒಂದು ನಿರ್ಣಯ ಆದಮೇಲೆ ಆ ನಿರ್ಣಯದಂತೆ ಕ್ರಮ ಜರುಗಿಸುವಂತಹ ಕೆಲಸ ಇರುತ್ತದೆ. ಅದರಂತೆ ಎಲ್ಲಾ ಶಾಸಕರು ಕೂಡ ಮಾಡತಕ್ಕಂತಹ ಜವಾಬ್ದಾರಿ ಇಲ್ಲಿದೆ. ಆ ಜವಾಬ್ದಾರಿ ನಿರ್ವಹಣೆ ಮಾಡಲಿಲ್ಲ ಎಂದು ಹೇಳಿದರೆ ನಾವೆಲ್ಲರೂ ತಪ್ಪು ಮಾಡಿದ್ದೇವೆ ಎಂದು ಅರ್ಥ. ಆ ತಪ್ಪಿಗೆ ಶಿಕ್ಷೆಯೂ ಕೂಡ ಆಗಬೇಕಾಗುತ್ತದೆ. ನಮ್ಮ ಶಾಸಕರು ಇದ್ದು ಕೂಡ ನಾವು ಸೋಲು ಅನುಭವಿಸುತ್ತೇವೆ ಎಂದು ಹೇಳಿದರೆ ನಿಜಕ್ಕೂ ಕೂಡ ಅದು ಒಂದು ರೀತಿಯ ಪಕ್ಷಕ್ಕೆ ಆದಂತ ಅನ್ಯಾಯ. ಈ 26 ಜನ ಎಂಎಲ್ಎಗಳಿಗೂ ಕೂಡ ಮುಖಭಂಗ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಸ್ಟಿಂಗ್ ಆಪರೇಷನ್ ತನಿಖೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯತ್ತ ತಿರುಗಿರುವ ವಿಚಾರವಾಗಿ ಮಾತನಾಡಿದ ರಾಜಣ್ಣ, ಸಾರ್ವಜನಿಕ ಜೀವನದಲ್ಲಿ ಪ್ರತಿದಿನ ಹಲವು ವ್ಯಕ್ತಿಗಳು ಭೇಟಿಯಾಗುತ್ತಾರೆ. ಪರಿಚಯ ಇರುವವರು, ಇಲ್ಲದವರು ಫೋಟೋ ತೆಗೆಸಿಕೊಳ್ಳುತ್ತಾರೆ. ಪ್ರತಿಯೊಬ್ಬರ ಹಿನ್ನೆಲೆಯನ್ನು ಪರಿಶೀಲಿಸಿ ಮಾತನಾಡಲು ಸಾಧ್ಯವಿಲ್ಲ. ರಾಜಕೀಯ ಜೀವನದಲ್ಲಿ ಇಂತಹ ಸಂದರ್ಭಗಳು ಸಾಮಾನ್ಯ ಎಂದು ಪ್ರತಿಕ್ರಿಯಿಸಿದರು.

