ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಿಜೆಪಿ ಸಿಎಂ ಅಭ್ಯರ್ಥಿ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆದಿದೆ.
ಪಶ್ಚಿಮ ಬಂಗಾಳದ ಹಲವೆಡೆ ಹಿಂಸಾಚಾರ ನಡೆಯುತ್ತಿದ್ದು, ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆದಿದೆ. ಬಸಿರ್ ಹಾಟ್ ಪ್ರದೇಶದಲ್ಲಿ ಗಲಾಟೆ ವೇಳೆ ಫೈರಿಂಗ್ ನಡೆದಿದ್ದು, ಓರ್ವ ಬಿಜೆಪಿ ಕಾರ್ಯಕರ್ತನಿಗೆ ಗುಂಡೇಟು ತಗುಲಿದೆ.
ಗಂಭೀರವಾಗಿ ಗಾಯಗೊಂಡಿರುವ ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಧ್ವಜ ಕಟ್ಟುವ ವಿಚಾರವಾಗಿ ಗಲಾಟೆ ನಡೆದಿದ್ದು, ಈ ವೇಳೆ ಗುಂಡಿನ ದಾಳಿ ನಡೆದಿದೆ. ಗಾಯಾಳು ಬಿಜೆಪಿ ಕಾರ್ಯಕರ್ತನನ್ನು ರೋಹಿತ್ ರಾಯ್ ಎಂದು ಗುರುತಿಸಲಾಗಿದೆ.
ಬೆಳಿಗ್ಗೆಯಷ್ಟೇ ಬಿಜೆಪಿ ಶಾಸಕಿ ರತ್ನ ದೇಬನಾಥ್ ಅವರ ನಿವಾಸದ ಬಳಿ ಬಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಬಿಜೆಪಿಯ ಐವರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರು ನಿಯೋಜನೆಗೊಂಡಿದ್ದಾರೆ.

