ಪಂಜಾಬ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಕ್ರಿಕೆಟಿಗ ಅಮನ್‌ಪ್ರೀತ್ ಸಿಂಗ್ ಗಿಲ್ ನಿನ್ನೆ ( ಮೇ 6 ) ನಿಧನ ಹೊಂದಿದ್ದಾರೆ. ಮೀಡಿಯಮ್ ಪೇಸ್ ಬೌಲರ್ ಆಗಿದ್ದ ಅಮನ್‌ಪ್ರೀತ್ ಸಿಂಗ್ ಗಿಲ್ ಹಠಾತ್ ನಿಧನ ಹೊಂದಿದ್ದು, ಸಾವಿಗೆ ಕಾರಣ ಇನ್ನೂ ತಿಳಿದು ಬರಬೇಕಿದೆ.
ಅಮನ್‌ಪ್ರೀತ್ ಸಿಂಗ್ ಕೌರ್ ಅವರಿಗೆ 36 ವರ್ಷ ವಯಸ್ಸಾಗಿತ್ತು. ಕ್ರಿಕೆಟಿಗನಾಗಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಇವರು ಪಂಜಾಬ್ ಕ್ರಿಕೆಟ್‌ನ ಹಿರಿಯ ಆಯ್ಕೆಗಾರರ ಸಮಿತಿಯ ಸದಸ್ಯರೂ ಸಹ ಆಗಿದ್ದರು.
ವಿರಾಟ್ ಕೊಹ್ಲಿ ಅಂಡರ್ 19 ನಾಯಕನಾಗಿದ್ದ ತಂಡದಲ್ಲಿಯೂ ಸಹ ಆಡಿದ್ದ ಅಮನ್‌ಪ್ರೀತ್ ಸಿಂಗ್ ಗಿಲ್ ಐಪಿಎಲ್‌ನಲ್ಲಿ ಈ ಹಿಂದೆ ಕಿಂಗ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು.
ಹೀಗೆ ಹಠಾತ್ ನಿಧನ ಹೊಂದಿದ ಅಮನ್‌ಪ್ರೀತ್ ಸಿಂಗ್ ಗಿಲ್ ಕುರಿತು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು, ‘ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನದ ಸುದ್ದಿ ಕೇಳಿ ಆಘಾತ ಮತ್ತು ದುಃಖಕ್ಕೊಳಗಾಗಿದ್ದೇನೆ, ಅವರ ಕುಟುಂಬ ಈ ಸಮಯದಲ್ಲಿ ಧೈರ್ಯದಿಂದರಲಿ ಎಂದು ಪ್ರಾರ್ಥಿಸುತ್ತೇನೆ, ಓಂ ಶಾಂತಿ’ ಎಂದು ಬರೆದುಕೊಂಡಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಹ ಅಮನ್‌ಪ್ರೀತ್ ಸಿಂಗ್ ಕೌರ್ ನಿಧನದ ಬಗ್ಗೆ ಟ್ವೀಟ್ ಮಾಡಿದ್ದು, ‘ಅಮನ್‌ಪ್ರೀತ್ ಸಿಂಗ್ ಗಿಲ್ ನಿಧನದ ಸುದ್ದಿಯಿಂದ ತೀರ ದುಃಖಕ್ಕೀಡಾಗಿದ್ದೇನೆ. ಈ ಹಿಂದೆ ಇಬ್ಬರೂ ಒಂದೇ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದೆವು. ಆತ ಆಟವನ್ನು ಪ್ರೀತಿಸುವ ಶ್ರಮಿಕ ಆಟಗಾರನಾಗಿದ್ದ. ಅವರ ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

