ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಪ್ರೇಮ ಸಂಬಂಧದ ವಿಚಾರವಾಗಿ ನಡೆದ ಜಗಳ 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯ ಭೀಕರ ಹತ್ಯೆಗೆ ದಾರಿಯಾಗಿದೆ. 23 ವರ್ಷದ ಆಕೆಯ ಪ್ರಿಯಕರನೇ ಕತ್ತು ಸೀಳಿ ಹತ್ಯೆ ಮಾಡಿ, ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬೈಕ್ನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಾಹನ ತಪಾಸಣೆ ವೇಳೆ ಬಯಲಾದ ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಪ್ರೇಮ ಸಂಬಂಧದ ವಿಚಾರವಾಗಿ ನಡೆದ ಜಗಳ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ 23 ವರ್ಷದ ಪ್ರಿಯಕರನೇ ಹತ್ಯೆ ಮಾಡಿ, ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಬೈಕ್ನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರೇಯಸಿಯ ಕತ್ತು ಸೀಳಿ ಹತ್ಯೆ ಮಾಡಿದ ಬಳಿಕ, ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬೈಕ್ನಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಾಹನ ತಪಾಸಣೆ ವೇಳೆ ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಪುರುಲಿಯಾ ಜಿಲ್ಲೆಯ ಹುರಮ್ದಾ ಗ್ರಾಮದ ನಿವಾಸಿ ಅಮಿತ್ ಕುಮಾರ್ ಮಹತೋ (23) ಮೆಸ್ನಲ್ಲಿ ವಾಸವಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ. ಅದೇ ಪ್ರದೇಶದ ನರ್ಸಿಂಗ್ ವಿದ್ಯಾರ್ಥಿನಿ ಪ್ರತಿಕಾ ಮಹತೋ (21) ಮತ್ತು ಅಮಿತ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಹಿಂದೆ ಇಬ್ಬರೂ ಒಂದೇ ಕೋಚಿಂಗ್ ಸೆಂಟರ್ನಲ್ಲಿ ಓದುತ್ತಿದ್ದರು.
ಕಳೆದ ಶನಿವಾರ ಪ್ರತಿಕಾ, ಅಮಿತ್ ವಾಸಿಸುತ್ತಿದ್ದ ಮೆಸ್ಗೆ ತೆರಳಿದ್ದಳು. ಅಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೋಪಗೊಂಡ ಅಮಿತ್, ಹರಿತವಾದ ಆಯುಧದಿಂದ ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ನಂತರ ಮೃತದೇಹವನ್ನು ವಿಲೇವಾರಿ ಮಾಡಲು ಯೋಜನೆ ರೂಪಿಸಿದ ಅಮಿತ್, ಆಕೆಯ ಮೃತದೇಹವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಚೀಲದಲ್ಲಿ ಕಟ್ಟಿ ತನ್ನ ಬೈಕ್ಗೆ ಹಾಕಿಕೊಂಡಿದ್ದಾನೆ. ಮಧ್ಯರಾತ್ರಿ ಪುರುಲಿಯಾ–ಬಾಘ್ಮುಂಡಿ–ಬಲರಾಮ್ಪುರ ರಸ್ತೆಯ ಕಡೆಗೆ ಮೃತದೇಹವನ್ನು ಎಸೆಯಲು ತೆರಳಿದ್ದಾನೆ.
ಅದೇ ಸಮಯದಲ್ಲಿ ಪೊಲೀಸರು ಆ ಮಾರ್ಗದಲ್ಲಿ ತೀವ್ರ ವಾಹನ ತಪಾಸಣೆ ನಡೆಸುತ್ತಿದ್ದರು. ಬೈಕ್ನಲ್ಲಿ ಬರುತ್ತಿದ್ದ ಅಮಿತ್ನನ್ನು ಅನುಮಾನದಿಂದ ತಡೆದು ಪರಿಶೀಲಿಸಿದಾಗ, ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಇರುವುದು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಭಿನ್ನಾಭಿಪ್ರಾಯಗಳೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತ ಅಮಿತ್ ಕುಮಾರ್ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆಗಾಗಿ ನ್ಯಾಯಾಲಯವು ಆತನಿಗೆ 9 ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.
ಹತ್ಯೆಗೆ ಬಳಸಿದ ಆಯುಧ ಎಲ್ಲಿದೆ? ಮೃತದೇಹವನ್ನು ನಿಖರವಾಗಿ ಎಲ್ಲಿ ವಿಲೇವಾರಿ ಮಾಡಲು ಆರೋಪಿ ಉದ್ದೇಶಿಸಿದ್ದ? ಸೇರಿದಂತೆ ಹಲವು ಅಂಶಗಳ ಕುರಿತು ಪೊಲೀಸರು ಸಮಗ್ರ ತನಿಖೆ ಮುಂದುವರಿಸಿದ್ದಾರೆ.

