ಪಶ್ಚಿಮ ಬಂಗಾಳ ರಾಜ್ಯದ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. 294 ಸದಸ್ಯ ಬಲದ ವಿಧಾನಸಭೆಗೆ ಚುನಾವಣಾ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ತಯಾರಿ ಜೋರಾಗಿದೆ. ರಾಜ್ಯದಲ್ಲಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 148.
ಬಿಜೆಪಿ ಮತ್ತು ಟಿಎಂಸಿ ನಡುವೆ ಚುನಾವಣೆಯಲ್ಲಿ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. 2021ರ ಚುನಾವಣೆಯಲ್ಲಿ ಬಿಜೆಪಿ 77 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು ಮತ್ತು 60 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಈ ಬಾರಿ ಹೆಚ್ಚು ಸೀಟುಗಳಲ್ಲಿ ಗೆಲ್ಲಲು ಪಕ್ಷ ತಂತ್ರ ರೂಪಿಸುತ್ತಿದೆ.
ಡಿಜಿಟಲ್ ಪೋಸ್ಟರ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಪೋಸ್ಟರ್ ಅಭಿಯಾನ ಆರಂಭಿಸಿದೆ. ಇದು ಸಾಮಾನ್ಯವಾದ ಪೋಸ್ಟರ್ ಅಲ್ಲ. ಇದನ್ನು ಅಂಟಿಸುವುದು ಸುಲಭ. ಆದರೆ ಇದನ್ನು ನಾಶ ಮಾಡುವುದು ಅಷ್ಟು ಸುಲಭದ ಕೆಲವಲ್ಲ.
ಪಶ್ಚಿಮ ಬಂಗಾಳದಲ್ಲಿ ಅಂಟಿಸುತ್ತಿರುವ ಡಿಜಿಟಲ್ ಪೋಸ್ಟರ್ ಪರಿಸರ ಸ್ನೇಹಿ ಎಂದು ಬಿಜೆಪಿ ಹೇಳಿದೆ. ಈ ಬಾರಿಯ ಬಿಜೆಪಿಯ ಪ್ರಚಾರ ತಂತ್ರವು ಎಲ್ಲರ ಗಮನ ಸೆಳೆಯುತ್ತಿದೆ. ಗೋಡೆಗಳ ಮೇಲೆ ಡಿಜಿಟಲ್ ಪೋಸ್ಟರ್‌ಗಳನ್ನು ನೀರಿನ ಸಹಾಯದಿಂದ ಸುಲಭವಾಗಿ ಅಂಟಿಸಬಹುದು, ಆದರೆ ಅಷ್ಟು ಸುಲಭವಾಗಿ ಹರಿದು ಹಾಕಲು ಸಾಧ್ಯವಿಲ್ಲ.
ಈ ಪೋಸ್ಟರ್ ಅಂಟಿಸಿದಾಗ ಅವು ಗೋಡೆಗೆ ಸುಲಭವಾಗಿ ಅಂಟಿಕೊಳ್ಳುತ್ತವೆ. ಇವುಗಳನ್ನು ಕೇವಲ ನೀರಿನ ಸಹಾಯದಿಂದ ಅಂಟಿಸಲಾಗುತ್ತದೆ ಮತ್ತು ಯಾವುದೇ ಗಮ್ ಅಥವಾ ಅಂಟು ಪದಾರ್ಥದ ಅಗತ್ಯವಿರುವುದಿಲ್ಲ. ಪರಿಸರಕ್ಕೆ ಆಗುವ ಹಾನಿ ತುಂಬಾ ಕಡಿಮೆ ಮತ್ತು ಇವು ಬಹಳ ಕಾಲ ಬಾಳಿಕೆ ಬರುತ್ತವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಸಾಮಾನ್ಯ ಪೋಸ್ಟರ್ ಅಂಟಿಸಿದಾ ವಿರೋಧ ಪಕ್ಷದವರು ಅದನ್ನು ನಾಶ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಬಿಜೆಪಿ ತನ್ನ ಪೋಸ್ಟರ್ ತಂತ್ರವನ್ನು ಬದಲಿಸಿದೆ. ಈ ಡಿಜಿಟಲ್ ಪೋಸ್ಟರ್ ಅನ್ನು ಯಾರಾದರೂ ಹರಿದು ಹಾಕಲು ಬಹಳ ಕಷ್ಟ. ಈ ಪೋಸ್ಟರ್ ಹಲವಾರು ದಿನಗಳ ಕಾಲ ಹಾಗೆಯೇ ಉಳಿಯುತ್ತದೆ.
ಚುನಾವಣೆಗಾಗಿ ಬಿಜೆಪಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಮಂಡಲಕ್ಕೆ ಸುಮಾರು 6,500 ಪಕ್ಷದ ಧ್ವಜಗಳನ್ನು ನೀಡಲಾಗಿದೆ. ಪ್ರತಿ ಜಿಲ್ಲೆಗೆ 1 ಲಕ್ಷ ಧ್ವಜಗಳನ್ನು ವಿತರಿಸಲಾಗಿದೆ. ಇದರ ಹೊರತಾಗಿ, ಸಾವಿರಾರು ಸಂಖ್ಯೆಯ ಡಿಜಿಟಲ್ ಪೋಸ್ಟರ್‌ಗಳನ್ನು ಸಹ ಹಾಕಲಾಗುತ್ತಿದೆ.

