ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ಫ್ಲೈ-91 ವಿಮಾನವು ತಾಂತ್ರಿಕ ದೋಷ ಅಥವಾ ಲ್ಯಾಂಡಿಂಗ್ ಸಮಸ್ಯೆಯಿಂದಾಗಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಗಾಳಿಯಲ್ಲೇ ಹಾರಾಟ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ವಿಶೇಷವೆಂದರೆ, ಕೇವಲ 5 ದಿನಗಳ ಅಂತರದಲ್ಲಿ ಫ್ಲೈ-91 ಸಂಸ್ಥೆಗೆ ಎದುರಾದ ಎರಡನೇ ಘಟನೆ ಇದಾಗಿದೆ.
IC3412 ಸಂಖ್ಯೆಯ ವಿಮಾನವು ಮಂಗಳವಾರ ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಹೊರಟಿತ್ತು.ಇದು ಸಂಜೆ 6:50ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ವಿಮಾನವು ಸರಿಯಾದ ಸಮಯಕ್ಕೆ ಹುಬ್ಬಳ್ಳಿ ತಲುಪಿದರೂ, ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಇದರಿಂದಾಗಿ ವಿಮಾನವನ್ನು ಇಳಿಸಲು ಸಾಧ್ಯವಾಗದೆ ಪೈಲಟ್ ಸುಮಾರು 2 ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಡಿಸಿದರು.
ಸುರಕ್ಷಿತ ಲ್ಯಾಂಡಿಂಗ್ : ಅಂತಿಮವಾಗಿ ರಾತ್ರಿ 9:15ಕ್ಕೆ ವಿಮಾನವು ಸುರಕ್ಷಿತವಾಗಿ ಹುಬ್ಬಳ್ಳಿಯಲ್ಲಿ ಇಳಿಯಿತು. ಅಲ್ಲಿಯವರೆಗೆ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಕುಳಿತಿದ್ದರು.ಈ ಘಟನೆಯು ಪ್ರಯಾಣಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಮತ್ತೆ ಸಮಸ್ಯೆ: ಕಳೆದ ಶುಕ್ರವಾರ (ಏಪ್ರಿಲ್ 19) ಹೈದರಾಬಾದ್‌ನಿಂದ ಬಂದ ಫ್ಲೈ-91 ವಿಮಾನವು ಹವಾಮಾನ ವೈಪರೀತ್ಯದ ಕಾರಣ ನೀಡಿ 4 ಗಂಟೆ ಹಾರಾಟ ನಡೆಸಿ ಬೆಂಗಳೂರಿಗೆ ಹೋಗಿತ್ತು. ಈಗ 5 ದಿನದೊಳಗೆ ಎರಡನೇ ಬಾರಿಗೆ ಇಂತಹದ್ದೇ ಘಟನೆ ನಡೆದಿದೆ.
ಬೇರೆ ವಿಮಾನಗಳಿಗಿಲ್ಲದ ತೊಂದರೆ: ವಿಶೇಷವೆಂದರೆ, ಫ್ಲೈ-91 ವಿಮಾನ ಲ್ಯಾಂಡಿಂಗ್ ಸಮಸ್ಯೆಯನ್ನು ಎದುರಿಸುತ್ತಿದ್ದ ಅದೇ ಸಮಯದಲ್ಲಿ, ಹುಬ್ಬಳ್ಳಿ ನಿಲ್ದಾಣದಲ್ಲಿ ಇತರ ವಿಮಾನಗಳು ಸುಗಮವಾಗಿ ಟೇಕಾಫ್ ಮತ್ತು ಲ್ಯಾಂಡಿಂಗ್ ಆಗಿವೆ. ಆದರೆ ಫ್ಲೈ-91 ವಿಮಾನಕ್ಕೆ ಮಾತ್ರ ಸಮಸ್ಯೆ ಕಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.
ತಾಂತ್ರಿಕ ದೋಷದ ಶಂಕೆ: ಹವಾಮಾನ ಚೆನ್ನಾಗಿದ್ದರೂ ಲ್ಯಾಂಡಿಂಗ್ ವಿಳಂಬವಾಗಿರುವುದು ವಿಮಾನದ ತಾಂತ್ರಿಕ ಸಾಮರ್ಥ್ಯದ ಬಗ್ಗೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಯಾಣಿಕರು ಸುಮಾರು 2 ಗಂಟೆಗಳ ಕಾಲ ತೀವ್ರ ಆತಂಕದಲ್ಲಿದ್ದು, ವಿಮಾನ ಲ್ಯಾಂಡ್ ಆದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.

