ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಇಂದೋರ್ ನ ಭಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ ಅತಿಸಾರದಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಮೇಯರ್ ಪುಷ್ಯಮಿತ್ರ ತಿಳಿಸಿದ್ದಾರೆ. ಆದರೆ ಸ್ಥಳೀಯರು ಆರು ತಿಂಗಳ ಮಗು ಸೇರಿ 14 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಗ್ಯ ಇಲಕಹೆ ಅಂಕಿ-ಅಂಶಗಳ ಪ್ರಕಾರ ಭಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಅತಿಸಾರ ಉಂಟಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ 10 ಜನರು ಸಾವನ್ನಪ್ಪಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ಪೈಪ್ ಲೈನ್ ಸೋರಿಕೆಯಾಗಿ ಕುಡಿಯಿವ ನೀರು ಕಲುಷಿತಗೊಂಡು ಈ ಘಟನೆ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾಗಿ ಮೇಯರ್ ತಿಳಿಸಿದ್ದಾರೆ.
ಕಲುಷಿತ ನೀರಿನಿಂದಾಗಿ ಗ್ರಾಮದ 1400ಕ್ಕೂ ಹೆಚ್ಚು ಜನರು ಕಳೆದ ಒಂಭತ್ತು ದಿನಗಳಿಮ್ದ ವಾಂತಿ, ಅತಿಸಾರದಿಂದ ಬಳಲುತ್ತಿದ್ದಾರೆ. 272 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 71 ಜನರು ಡಿಸ್ಚಾರ್ಜ್ ಆಗಿದ್ದಾರೆ. 201 ರೋಗಿಗಳಲ್ಲಿ 31 ರೋಗಿಗಳನ್ನು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

