ಭಾರತೀಯ ಹವಾಮಾನ ಇಲಾಖೆ ಮುಂದಿನ ಮೂರು ತಿಂಗಳ ದೇಶದ ಹವಾಮಾನ ಮುನ್ಸೂಚನೆ ನೀಡಿದೆ. ಜನವರಿ ಮಾರ್ಚ್ ತನಕ ಪಂಜಾಬ್ ಮತ್ತು ಹರ್ಯಾಣ ಸೇರಿದಂತೆ ವಾಯುವ್ಯ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಆದರೆ ಇದೇ ಅವಧಿಯಲ್ಲಿ ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ್ದಾರೆ. “ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಜನವರಿಯಿಂದ ಮಾರ್ಚ್‌ವರೆಗೆ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ, ಆದರೆ ಪಂಜಾಬ್ ಮತ್ತು ಹರ್ಯಾಣ ಒಳಗೊಂಡಿರುವ ವಾಯುವ್ಯ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ” ಎಂದು ತಿಳಿಸಿದರು.
“ಈ ಮಳೆಯ ಮುನ್ಸೂಚನೆಯು ಬೆಳೆಗಳ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಏಕೆಂದರೆ ದೇಶದ ವಾಯುವ್ಯ ಭಾಗಗಳು ಉತ್ತಮ ನೀರಾವರಿ ಸೌಲಭ್ಯವನ್ನು ಹೊಂದಿವೆ ಮತ್ತು ಉತ್ತಮ ಮುಂಗಾರು ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿವೆ” ಎಂದು ಹೇಳಿದರು.
ಮಳೆ ಮುನ್ಸೂಚನೆ ಮತ್ತು ಪರಿಣಾಮ: ಈಶಾನ್ಯ ಭಾರತ, ಬಿಹಾರದ ಕೆಲವು ಭಾಗಗಳು ಮತ್ತು ವಿದರ್ಭದಲ್ಲಿ ಹೆಚ್ಚುವರಿಯಾಗಿ ಒಂದರಿಂದ ಮೂರು ದಿನಗಳ ಕಾಲ ಚಳಿಯ ದಿನಗಳು ಇರಲಿವೆ. ಆದರೆ ರಾಜಸ್ಥಾನದಲ್ಲಿ ಕಡಿಮೆ ಚಳಿಯ ದಿನಗಳು ಇರಲಿವೆ ಎಂದು ವಿಶ್ಲೇಷಿಸಲಾಗಿದೆ.
ಜನವರಿ ತಿಂಗಳ ಕನಿಷ್ಠ ತಾಪಮಾನವು ದೇಶದ ಹೆಚ್ಚಿನ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಇರುವ ಸಾಧ್ಯತೆಯಿದೆ. ಆದರೆ, ವಾಯುವ್ಯ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳು ಹಾಗೂ ಪರ್ಯಾಯ ದ್ವೀಪ ಭಾರತದಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ಇರಲಿದೆ.
ವಾಯುವ್ಯ ಮತ್ತು ಮಧ್ಯ ಭಾರತಕ್ಕೆ ಮಳೆ ಹಾಗೂ ಗುಡುಗು ಸಹಿತ ಮಳೆಯನ್ನು ತರುವ ಪಶ್ಚಿಮದ ಅಡಚಣೆಗಳ ಕಾರಣದ ಅಲಭ್ಯತೆಯೇ ಡಿಸೆಂಬರ್ ತಿಂಗಳು ಸಂಪೂರ್ಣ ಶುಷ್ಕವಾಗಿರಲು ಕಾರಣವಾಗಿತ್ತು ಎಂದು ವಿವರಿಸಿದ್ದಾರೆ.
ಈ ಪಶ್ಚಿಮದ ಅಡಚಣೆಗಳು ಒಂದೋ ಉತ್ತರದ ಕಡೆಗೆ ಚಲಿಸುತ್ತಿವೆ ಅಥವಾ ಅತಿ ವೇಗವಾಗಿ ಸಾಗುತ್ತಿವೆ. ಹವಾಮಾನ ಮಾದರಿಯ ಈ ಬದಲಾವಣೆಗೆ ಹವಾಮಾನ ವೈಫರಿತ್ಯ ಕಾರಣ. ಸಆದಾಗ್ಯೂ, ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಕಡಿಮೆ ಹಿಮಪಾತವಾಗುವುದು ನೈಋತ್ಯ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಸ್ತುತ ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರದ ಮೇಲ್ಮೈ ತಂಪಾಗುವ ಲಾ ನಿನಾ ಪರಿಸ್ಥಿತಿ ಇದೆ ಮತ್ತು ಮಾರ್ಚ್ ವೇಳೆಗೆ ಎನ್ಸೋ ನ್ಯೂಟ್ರಾಲ್ ಸ್ಥಿತಿ ನಿರ್ಮಾಣವಾಗಲಿದೆ ಎಂದು ಜಾಗತಿಕ ಹವಾಮಾನ ಮಾದರಿಗಳು ಮುನ್ಸೂಚನೆ ನೀಡಿವೆ. ಈ ಎನ್ಸೋ ನ್ಯೂಟ್ರಾಲ್ ಸ್ಥಿತಿಯು ಜೂನ್-ಜುಲೈವರೆಗೆ ಮುಂದುವರಿಯುವ ಸಾಧ್ಯತೆಯಿದ್ದು, ಇದು ಉತ್ತಮ ಮುಂಗಾರು ಮಳೆಯ ಸೂಚಕವಾಗಿದೆ.
1901ರ ನಂತರ 2025ನೇ ವರ್ಷವು 8ನೇ ಅತ್ಯಂತ ಬಿಸಿಯಾದ ವರ್ಷವಾಗಿದೆ. ಭಾರತದ ವಾರ್ಷಿಕ ಸರಾಸರಿ ತಾಪಮಾನವು 1991-2020ರ ದೀರ್ಘಾವಧಿಯ ಸರಾಸರಿಗಿಂತ 0.28 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು. ಇದುವರೆಗಿನ ದಾಖಲೆಯ ಅತ್ಯಂತ ಬಿಸಿಯಾದ ವರ್ಷ 2024 ಆಗಿದ್ದು, ಆಗ ತಾಪಮಾನವು ಸರಾಸರಿಗಿಂತ 0.65 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು.
ಚಳಿಗಾಲದ ಅವಧಿಯಲ್ಲಿ (ಜನವರಿ-ಫೆಬ್ರವರಿ) ಮತ್ತು ಮುಂಗಾರು ಪೂರ್ವ (ಮಾರ್ಚ್-ಮೇ) ಅವಧಿಯಲ್ಲಿ ಭಾರತದ ಸರಾಸರಿ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ ಕ್ರಮವಾಗಿ 1.17 ಡಿಗ್ರಿ ಸೆಲ್ಸಿಯಸ್ ಮತ್ತು 0.29 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು. ನೈಋತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ಮತ್ತು ಮುಂಗಾರು ನಂತರದ (ಅಕ್ಟೋಬರ್-ಡಿಸೆಂಬರ್) ಅವಧಿಯಲ್ಲಿ ತಾಪಮಾನವು ಸರಾಸರಿಯಲ್ಲಿಯೇ ಇತ್ತು.

