HomeLatest Newsದ್ರೌಪದಿ ತಯಾರಿಸಿದ ತಿಂಡಿ ಇಂದು ಗಲ್ಲಿ ಗಲ್ಲಿಯಲ್ಲಿ ಫೇಮಸ್: ಭಾರತದ ನೆಚ್ಚಿನ ಪಾನಿಪುರಿ ಹಿಂದಿದೆ ರೋಚಕ...

ದ್ರೌಪದಿ ತಯಾರಿಸಿದ ತಿಂಡಿ ಇಂದು ಗಲ್ಲಿ ಗಲ್ಲಿಯಲ್ಲಿ ಫೇಮಸ್: ಭಾರತದ ನೆಚ್ಚಿನ ಪಾನಿಪುರಿ ಹಿಂದಿದೆ ರೋಚಕ ಇತಿಹಾಸ!

ಭಾರತೀಯರ ನೆಚ್ಚಿನ ಖಾದ್ಯಗಳ ಪಟ್ಟಿಯಲ್ಲಿ ಪಾನಿಪುರಿಗೆ ಯಾವಾಗಲೂ ಮೊದಲ ಸ್ಥಾನ. ಗಲ್ಲಿ ಗಲ್ಲಿಗಳಲ್ಲಿ ಸಿಗುವ ಈ ಚಾಟ್ಸ್ ಎಂದರೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಪಂಚಪ್ರಾಣ. ಆದರೆ ಪ್ರತಿಯೊಬ್ಬರ ಬಾಯಲ್ಲೂ ನೀರೂರಿಸುವ ಈ ಪಾನಿಪುರಿಯು ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಹಲವು ಆಸಕ್ತಿಕರ ಕಥೆಗಳು ಸಿಗುತ್ತವೆ. ಅದರಲ್ಲಿ ಅತ್ಯಂತ ಜನಪ್ರಿಯ ಹಾಗೂ ರೋಚಕ ಕಥೆ ಅಂದರೆ ಅದು ಮಹಾಭಾರತದ ದ್ರೌಪದಿಯದ್ದು.

ಪೌರಾಣಿಕ ಕಥೆಯ ಪ್ರಕಾರ, ಪಾಂಡವರ ವನವಾಸದ ಸಮಯದಲ್ಲಿ ಹೊಸದಾಗಿ ಸೊಸೆಯಾಗಿ ಬಂದ ದ್ರೌಪದಿಯ ಚತುರತೆ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಲು ಅತ್ತೆ ಕುಂತಿ ನಿರ್ಧರಿಸಿದರು. ಅದಕ್ಕಾಗಿ ದ್ರೌಪದಿಗೆ ಸ್ವಲ್ಪವೇ ಆಲೂಗಡ್ಡೆ ಪಲ್ಯ ಮತ್ತು ಒಂದೇ ಒಂದು ಸಣ್ಣ ಚಪಾತಿ ಮಾಡಲು ಆಗುವಷ್ಟು ಗೋಧಿ ಹಿಟ್ಟನ್ನು ನೀಡಿ, ಇದರಿಂದ ಐವರು ಪಾಂಡವರ ಹಸಿವು ನೀಗಿಸಬೇಕು ಎಂದು ಷರತ್ತು ವಿಧಿಸಿದರು.

ಈ ಸವಾಲನ್ನು ಸ್ವೀಕರಿಸಿದ ದ್ರೌಪದಿ, ಕೇವಲ ಒಂದೇ ಚಪಾತಿಯ ಹಿಟ್ಟಿನಿಂದ ಸಣ್ಣ ಸಣ್ಣ ಗೋಲಿಗಳನ್ನು ಮಾಡಿ ಅವುಗಳನ್ನು ಕರಿದು, ಉಬ್ಬಿದ ಪೂರಿಗಳನ್ನು ತಯಾರಿಸಿದರು. ನಂತರ ಅದರೊಳಗೆ ಆಲೂಗಡ್ಡೆ ಮಿಶ್ರಣವನ್ನು ತುಂಬಿಸಿ ಐವರು ಪತಿಗಳಿಗೆ ಬಡಿಸಿದರು. ಅತ್ಯಲ್ಪ ಆಹಾರದಲ್ಲೇ ಐವರ ಹಸಿವನ್ನು ನೀಗಿಸಿದ ದ್ರೌಪದಿಯ ಉಪಾಯ ಹಾಗೂ ಕೈರುಚಿಗೆ ಮೆಚ್ಚಿದ ಕುಂತಿ, ಈ ತಿಂಡಿಗೆ ಅಮರತ್ವದ ಅಭಯ ನೀಡಿದರೆಂಬ ಪ್ರತೀತಿಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತಿಹಾಸಕಾರರ ಪ್ರಕಾರ ಪಾನಿಪುರಿಯ ಮೂಲ ದ್ರೌಪದಿಯ ಕಥೆಗಿಂತ ಭಿನ್ನವಾಗಿದೆ. ಇತಿಹಾಸದ ದಾಖಲೆಗಳ ಪ್ರಕಾರ, ಪ್ರಾಚೀನ ಮಗಧ ಸಾಮ್ರಾಜ್ಯದಲ್ಲಿ ಅಂದರೆ ಇಂದಿನ ಬಿಹಾರ ಪ್ರದೇಶದಲ್ಲಿ ಈ ತಿನಿಸು ಮೊದಲು ರೂಪಗೊಂಡಿತು ಎನ್ನಲಾಗುತ್ತದೆ. ಆಗ ಇದನ್ನು ‘ಫುಲ್ಕಿ’ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಈ ಫುಲ್ಕಿಯೇ ವಿವಿಧ ರೂಪಗಳನ್ನು ಪಡೆದುಕೊಂಡು ದೇಶಾದ್ಯಂತ ಪಾನಿಪುರಿಯಾಗಿ ಪ್ರಸಿದ್ಧಿ ಪಡೆಯಿತು.

ಇಂದು ದೇಶದ ಬೇರೆ ಬೇರೆ ಭಾಗಗಳಲ್ಲಿ ಇದನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ‘ಗೋಲ್ ಗಪ್ಪಾ’, ಕೋಲ್ಕತ್ತಾದಲ್ಲಿ ‘ಪುಚ್ಕಾ’, ಒಡಿಶಾದಲ್ಲಿ ‘ಗುಪ್ ಚುಪ್’ ಹಾಗೂ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ‘ಬಟಾಶೆ’ ಎಂದೂ ಕರೆಯಲಾಗುತ್ತದೆ. ವನವಾಸದ ಸಮಯದಲ್ಲಿ ದ್ರೌಪದಿ ಮಾಡಿದ ಪ್ರಯೋಗವಿರಲಿ ಅಥವಾ ಮಗಧದ ಮಾರುಕಟ್ಟೆಯಲ್ಲಿ ಬೆಳೆದು ಬಂದ ಸಂಸ್ಕೃತಿಯಿರಲಿ, ಇಂದು ಪಾನಿಪುರಿ ಪ್ರತಿಯೊಬ್ಬ ಭಾರತೀಯನ ನೆಚ್ಚಿನ ಆಹಾರವಾಗಿ ಉಳಿದಿರುವುದಂತೂ ಸತ್ಯ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular