ಚಿಕ್ಕಮಗಳೂರು: ಮುಲ್ಲಾಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನಿಡಿದ್ದ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧದ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ.
ನೀಟ್ ಪರೀಕ್ಷೆ ಕುರಿತ ಪ್ರತಿಭಟನೆಗಳ ಬಗ್ಗೆ ಮುಲ್ಲಾಗಳಿಗೂ ನೀಟ್ ಗೂ ಏನು ಸಂಬಂಧ? ಎದೆ ಸೀಳಿದರೆ ಮೂರಕ್ಷರವಿಲ್ಲ ಎಂದು ಹೇಳುವ ಮೂಲಕ ಸಿ.ಟಿ.ರವಿ ವಿವಾದ ಸೃಷ್ಟಿಸಿದ್ದರು. ಈ ಸಂಬಂಧ ಸಿ.ಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ಪ್ರಕರಣವು ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ.
ಈ ಮಧ್ಯೆ ಎಫ್‌ಐಆರ್‌ಗೆ ತಡೆ ಕೋರಿ ಸಿ.ಟಿ.ರವಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಪ್ರಕರಣದ ಪ್ರತಿಯೊಂದಿಗೆ, ಎಫ್‌ಐಆರ್ ನಂತರ ನಡೆದ ಎಲ್ಲ ಬೆಳವಣಿಗೆಗಳ ಸಮಗ್ರ ವರದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಬೆಂಗಳೂರಿಗೆ ತೆರಳಿದ್ದಾರೆ.
ಮತ್ತೊಂದೆಡೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಸಂಖ್ಯೆ 149ಕ್ಕೆ ತಡೆ ನೀಡುವಂತೆ ಕೋರಿ ಸಿ.ಟಿ ರವಿ ಪರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಲಾಗಿದೆ.
ಜಾಮಿಯಾ ಮಸೀದಿ ಸಮಿತಿಯ ಅಧ್ಯಕ್ಷ ಮುದಾಸಿರ್ ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸಿ.ಟಿ. ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಈಗಾಗಲೇ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಬಳಿಕ ಸಿ.ಟಿ. ರವಿ ಅವರ ನಿವಾಸಕ್ಕೂ ತನಿಖಾಧಿಕಾರಿ ಹಾಗೂ ನಗರ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ನೋಟಿಸ್ ಅಂಟಿಸಿದ್ದರು.
ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದರಿಂದ ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯಲ್ಲಿರುವ ಸಿ.ಟಿ. ರವಿ ಅವರ ನಿವಾಸಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಗೂ ಡಿಎಆರ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಗಳ ವಿರುದ್ಧ ಚಿಕ್ಕಮಗಳೂರಿನಲ್ಲಿ ನಡೆದ ಧರಣಿ ವೇಳೆ ಸಿ.ಟಿ.ರವಿ, ‘ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ. ಅವರು ಬಂದು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದರೆ ಅದರ ಅರ್ಥವೇನು? ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಾಗೂ ಮೋದಿ ಹಠಾವೋ ಎಂದು ಘೋಷಣೆ ಕೂಗಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರಗಳಿಗೆ ಯಾವುದೇ ಸಂಬಂಧವಿಲ್ಲ. ಭಾರತವನ್ನು ತುಂಡರಿಸಬೇಕು ಎಂದು ಹೇಳಿದ ತುಕಡೆ ಗ್ಯಾಂಗ್‌ಗಳು ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು’ ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಸಿ.ಟಿ.ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

