ಬೆಂಗಳೂರು: ವಿಧಾನ ಪರಿಷತ್ ನ ಏಳು ಸದಸ್ಯ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದೆ. ಇಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆಸಲಾಗುವುದು ಒಂದು ಸ್ಥಾನಕ್ಕೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ಭಾರಿ ಕುತೂಹಲ ಕೆರಳಿಸಿದೆ.
ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕ್ರಮ ಕೈಗೊಂಡಿದ್ದು, ತಮ್ಮ ಶಾಸಕರನ್ನು ಬೇರೆ ಬೇರೆ ರೆಸಾರ್ಟ್ ಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಿಗ್ಗೆ ಪ್ರತ್ಯೇಕ ಬಸ್ ಗಳಲ್ಲಿ ವಿಧಾನಸೌಧದ ಆವರಣಕ್ಕೆ ಶಾಸಕರು ಆಗಮಿಸಿ ಮತದಾನ ಮಾಡಲಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇರ ಅಖಾಡಕ್ಕೆ ಇಳಿದಿದ್ದು, ವಿಧಾನಸಭೆ ಸದಸ್ಯರು ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡುವ ಈ ಚುನಾವಣೆಯಲ್ಲಿ ಗೆಲ್ಲಿಸಬಹುದಾದ ಸ್ಥಾನಕ್ಕಿಂತ ಹೆಚ್ಚುವರಿ ಅಭ್ಯರ್ಥಿಯಾಗಿ ತಮ್ಮ ಆಪ್ತ ವಿನಯ್ ಕಾರ್ತಿಕ್ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಏಕಾಂಗಿಯಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಂಖ್ಯಾಬಲ ಇಲ್ಲದಿದ್ದರೂ ಪಕ್ಷದ ಶಾಸಕರ ವಿಶ್ವಾಸ ಉಳಿಸಿಕೊಳ್ಳಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗೋವಿಂದರಾಜ್ ಅವರನ್ನು ಕಣಕ್ಕಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರನ್ನು ವಂಡರ್ ಲಾ ರೆಸಾರ್ಟ್ ನಲ್ಲಿ ಇರಿಸಲಾಗಿದ್ದು, ಇಂದು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡಲಿದ್ದಾರೆ. ಬಿಜೆಪಿಯ ಹೆಚ್ಚುವರಿ ಮತಗಳ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಅಡ್ಡ ಮತದಾನ ತಪ್ಪಿಸಲು ತಮ್ಮ ಶಾಸಕರನ್ನು ದೇವನಹಳ್ಳಿ ಸಮೀಪದ ರೆಸಾರ್ಟ್ ನಲ್ಲಿ ಇರಿಸಿದ್ದಾರೆ. ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ 4, ಬಿಜೆಪಿ 2 ಸ್ಥಾನಗಳನ್ನು ಗೆಲ್ಲಲಿದ್ದು, 7ನೇ ಸ್ಥಾನ ಗೆಲ್ಲುವ ಅವಕಾಶ ಯಾರಿಗಿದೆ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿಯ ಉಚ್ಛಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ.
ವಿಧಾನಸಭೆಯಲ್ಲಿ ಒಟ್ಟು 224 ಸ್ಥಾನಗಳಿದ್ದು, ಎರಡು ಸ್ಥಾನಗಳು ಖಾಲಿ ಇವೆ. ಕಾಂಗ್ರೆಸ್ 135, ಬಿಜೆಪಿ 62, ಜೆಡಿಎಸ್ 18, ಬಿಜೆಪಿಯಿಂದ ಉಚ್ಚಾಟಿತ 3 ಶಾಸಕರು ಇದ್ದಾರೆ. ಕೆ.ಆರ್.ಪಿ.ಪಿ. ಪಕ್ಷದ ಜನಾರ್ದನ ರೆಡ್ಡಿ 1, SKP ದರ್ಶನ್ ಪುಟ್ಟಣ್ಣಯ್ಯ 1, ಕಾಂಗ್ರೆಸ್ ನ ಸಹ ಸದಸ್ಯರು ಎರಡು ಸ್ಥಾನಗಳಿವೆ.

