ಬೆಂಗಳೂರು: ಭಾರತ ಒಂದು ಸೂರ್ಯನ ಬೆಳಕಿಗೆ ಹೆಸರುವಾಸಿಯಾದ ದೇಶ. ಇಲ್ಲಿ ವರ್ಷದ ಬಹುಪಾಲು ದಿನಗಳಲ್ಲಿ ಉತ್ತಮ ಬಿಸಿಲು ಇರುತ್ತದೆ. ಆದಾಗ್ಯೂ, ದೇಶದ ಜನರಲ್ಲಿ ಒಂದು ವಿಚಿತ್ರ ಹಾಗೂ ಆತಂಕಕಾರಿ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅದೇನೆಂದರೆ, ಭಾರತದ ಒಟ್ಟು ಜನಸಂಖ್ಯೆಯ ಶೇ. 70 ರಿಂದ ಹಿಡಿದು ಬರೋಬ್ಬರಿ ಶೇ. 90 ರಷ್ಟು ಜನರು ಇಂದಿಗೂ ವಿಟಮಿನ್ ಡಿ (Vitamin D3) ಕೊರತೆಯಿಂದ ಬಳಲುತ್ತಿದ್ದಾರೆ
ಬಿಸಿಲು ಸಮೃದ್ಧವಾಗಿದ್ದರೂ ಭಾರತೀಯರಲ್ಲಿ ಈ ಸನ್‌ಶೈನ್ ವಿಟಮಿನ್ ಕೊರತೆ ಏಕೆ ಕಾಡುತ್ತಿದೆ? ಇದರ ಲಕ್ಷಣಗಳು ಮತ್ತು ಪರಿಹಾರಗಳೇನು ಎಂಬ ಬಗ್ಗೆ ಪ್ರಖ್ಯಾತ ಸೆನ್ಸ್ ಕ್ಲಿನಿಕ್‌ನ ಹಿರಿಯ ತಜ್ಞರಾದ ಡಾ. ಆಕಾಂಕ್ಷಾ ಸಿಂಗ್ ಅವರು ಬಿಚ್ಚಿಟ್ಟಿರುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ:
ವಿಟಮಿನ್ ಡಿ ಎಂದರೇನು? ದೇಹದಲ್ಲಿ ಇದು ಹೇಗೆ ಉತ್ಪತ್ತಿಯಾಗುತ್ತದೆ?
ನಮ್ಮಲ್ಲಿ ಹಲವರು ಅಂದುಕೊಂಡಂತೆ ವಿಟಮಿನ್ ಡಿ ಎಂಬುದು ಕೇವಲ ಒಂದೇ ಅಂಶವಲ್ಲ. ಇದು ಡಿ1, ಡಿ2 ಮತ್ತು ಡಿ3 ಎಂಬ ವಿಟಮಿನ್‌ಗಳ ಒಂದು ಗುಂಪು. ಇದರಲ್ಲಿ ಮನುಷ್ಯನ ದೇಹಕ್ಕೆ ಅತ್ಯಂತ ಮುಖ್ಯವಾಗಿ ಬೇಕಾಗಿರುವುದು ವಿಟಮಿನ್ ಡಿ3 (Cholecalciferol).
ಸೂರ್ಯನ ಬೆಳಕಿನ ಮ್ಯಾಜಿಕ್: ನಮ್ಮ ಚರ್ಮವು ಸೂರ್ಯನಿಂದ ಬರುವ ನೇರ ನೇರಳೆರಾತೀತ ಬಿ (UVB) ಕಿರಣಗಳಿಗೆ ಒಡ್ಡಿಕೊಂಡಾಗ ದೇಹವು ನೈಸರ್ಗಿಕವಾಗಿ ವಿಟಮಿನ್ ಡಿ3 ಅನ್ನು ಉತ್ಪಾದಿಸುತ್ತದೆ. ಚರ್ಮದಲ್ಲಿರುವ ಕೊಲೆಸ್ಟ್ರಾಲ್ ಅಂಶವು ಸೂರ್ಯನ ಬೆಳಕಿಗೆ ಸಿಕ್ಕಾಗ ವಿಟಮಿನ್ ಡಿ3 ಆಗಿ ಬದಲಾಗುತ್ತದೆ.
ಲಿವರ್ ಮತ್ತು ಕಿಡ್ನಿಗಳ ಪಾತ್ರ: ಸೂರ್ಯನಿಂದ ಸಿಗುವ ಡಿ3 ಆಗಲಿ ಅಥವಾ ಸಸ್ಯಗಳಿಂದ ಸಿಗುವ ಡಿ2 ಆಗಲಿ ನೇರವಾಗಿ ಕೆಲಸ ಮಾಡುವುದಿಲ್ಲ. ಇವು ಮೊದಲು ನಮ್ಮ ಲಿವರ್ (ಯಕೃತ್ತು) ಮತ್ತು ಕಿಡ್ನಿಗಳಲ್ಲಿ (ಮೂತ್ರಪಿಂಡ) ಸಂಸ್ಕರಣೆಗೊಂಡು ಸಕ್ರಿಯ ರೂಪಕ್ಕೆ ಬಂದ ಮೇಲೆಯೇ ದೇಹಕ್ಕೆ ಶಕ್ತಿ ನೀಡುತ್ತವೆ.
ಭಾರತದಲ್ಲಿ ಬಿಸಿಲಿದ್ದರೂ ಕೊರತೆ ಕಾಡುತ್ತಿರುವುದಕ್ಕೆ ಅಸಲಿ ಕಾರಣಗಳೇನು?
ಡಾ. ಆಕಾಂಕ್ಷಾ ಸಿಂಗ್ ಅವರ ಪ್ರಕಾರ, ದಿನಕ್ಕೆ ಕೇವಲ 15 ರಿಂದ 20 ನಿಮಿಷಗಳ ಕಾಲ ಮಧ್ಯಾಹ್ನದ ಬಿಸಿಲಿಗೆ ಮೈಯೊಡ್ಡಿದರೆ ದೇಹಕ್ಕೆ ಬೇಕಾದಷ್ಟು ವಿಟಮಿನ್ ಡಿ ಸಿಗುತ್ತದೆ. ಆದರೆ ಇಂದಿನ ಆಧುನಿಕ ಜೀವನಶೈಲಿ ಎಲ್ಲವನ್ನೂ ಬದಲಾಯಿಸಿದೆ:
ಇಂಡೋರ್ ಲೈಫ್‌ಸ್ಟೈಲ್: ಐಟಿ ಉದ್ಯೋಗಗಳು, ಆಫೀಸ್‌ಗಳು ಹಾಗೂ ಮನೆಯ ಒಳಗೇ ದಿನವಿಡೀ ಕಳೆಯುವ ಅಭ್ಯಾಸದಿಂದ ಜನರಿಗೆ ಬಿಸಿಲೇ ತಗುಲುತ್ತಿಲ್ಲ.
ವಾಯು ಮಾಲಿನ್ಯ: ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ದಟ್ಟವಾದ ಹೊಗೆ ಮತ್ತು ಮಾಲಿನ್ಯವು ಸೂರ್ಯನ ಯುವಿಬಿ (UVB) ಕಿರಣಗಳನ್ನು ನೇರವಾಗಿ ಚರ್ಮಕ್ಕೆ ತಲುಪದಂತೆ ತಡೆಯುತ್ತಿದೆ.
ಸನ್‌ಸ್ಕ್ರೀನ್ ಬಳಕೆ: ಅತಿಯಾದ ಸನ್‌ಸ್ಕ್ರೀನ್ ಕ್ರೀಮ್‌ಗಳ ಬಳಕೆಯಿಂದಾಗಿ ಚರ್ಮವು ಬಿಸಿಲನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ.
ವಿಟಮಿನ್ ಡಿ ಕೇವಲ ಮೂಳೆಗೆ ಮಾತ್ರವಲ್ಲ, ಇಡೀ ದೇಹಕ್ಕೆ ಮುಖ್ಯ
ವಿಟಮಿನ್ ಡಿ ಕೇವಲ ಮೂಳೆಗಳನ್ನು ಗಟ್ಟಿಗೊಳಿಸಲು ಮಾತ್ರ ಸೀಮಿತವಾಗಿಲ್ಲ. ಇದರ ಪ್ರಯೋಜನಗಳು ಅತಿ ದೊಡ್ಡದಾಗಿವೆ:
ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ: ನಾವು ತಿನ್ನುವ ಆಹಾರದಿಂದ ಕ್ಯಾಲ್ಸಿಯಂ ಮತ್ತು ರಂಜಕವನ್ನು ದೇಹವು ಹೀರಿಕೊಳ್ಳಬೇಕಾದರೆ ವಿಟಮಿನ್ ಡಿ ಅತ್ಯಗತ್ಯ. ಇದರ ಕೊರತೆಯಾದರೆ ಮಕ್ಕಳಲ್ಲಿ ಮೂಳೆ ಡೊಂಕಾಗುವ ‘ರಿಕೆಟ್ಸ್’ ಕಾಯಿಲೆ ಬರುತ್ತದೆ. ಇನ್ನು ದೊಡ್ಡವರಲ್ಲಿ ಮೂಳೆ ಸವೆತ (Osteoporosis) ಮತ್ತು ಮೂಳೆ ಮುರಿತದ ಅಪಾಯ ಹೆಚ್ಚಾಗುತ್ತದೆ.
ರೋಗನಿರೋಧಕ ಶಕ್ತಿ ಮತ್ತು ಮೂಡ್ ಸ್ವಿಂಗ್ಸ್: ವಿಟಮಿನ್ ಡಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಇದರ ಕೊರತೆಯು ಮಾನಸಿಕ ಖಿನ್ನತೆ (Depression) ಮತ್ತು ಮೂಡ್ ಔಟ್ ಆಗಲು ಪ್ರಮುಖ ಕಾರಣ ಎಂದು ಸಂಶೋಧನೆಗಳು ಹೇಳಿವೆ.
ಆಹಾರದ ಮೂಲಗಳು ಮತ್ತು ಸಪ್ಲಿಮೆಂಟ್‌ಗಳ ಅತಿಯಾದ ಬಳಕೆ ಎಚ್ಚರ
ವಿಟಮಿನ್ ಡಿ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳು ತುಂಬಾ ಕಡಿಮೆ ಇವೆ. ಮೊಟ್ಟೆಯ ಹಳದಿ ಲೋಹ, ಸಾಲ್ಮನ್ ಮೀನು, ಕಾಡ್ ಲಿವರ್ ಆಯಿಲ್ ಹಾಗೂ ಫೋರ್ಟಿಫೈಡ್ ಮಾಡಿದ ಹಾಲು ಮತ್ತು ಧಾನ್ಯಗಳಲ್ಲಿ ಇದು ಸ್ವಲ್ಪ ಮಟ್ಟಿಗೆ ಸಿಗುತ್ತದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಜನರು ನೇರವಾಗಿ ಮಾತ್ರೆ ಅಥವಾ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ವೈದ್ಯರ ಮಹತ್ವದ ಎಚ್ಚರಿಕೆ: ವಿಟಮಿನ್ ಡಿ ಮಾತ್ರೆಗಳನ್ನು ತಜ್ಞ ವೈದ್ಯರ ಸಲಹೆ ಇಲ್ಲದೆ ಅತಿಯಾಗಿ ಸೇವಿಸಬೇಡಿ. ದೇಹದಲ್ಲಿ ವಿಟಮಿನ್ ಡಿ ಹೆಚ್ಚಾದರೆ ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗಿ (Hypercalcemia) ವಾಕರಿಕೆ, ಸುಸ್ತು ಮತ್ತು ತೀವ್ರ ಸಂದರ್ಭಗಳಲ್ಲಿ ಕಿಡ್ನಿ ಫೇಲ್ಯೂರ್ ಆಗುವ ಅಪಾಯ ಇರುತ್ತದೆ!
ಕೊನೆಯ ಮಾತು: ವಿಟಮಿನ್ ಡಿ ಕೊರತೆಯಿಂದ ದೂರವಿರಲು ಪ್ರತಿದಿನ ಸ್ವಲ್ಪ ಸಮಯ ಬಿಸಿಲಿನಲ್ಲಿ ಕಳೆಯಿರಿ, ಉತ್ತಮ ಆಹಾರ ಸೇವಿಸಿ ಹಾಗೂ ವೈದ್ಯರ ಸೂಕ್ತ ರಕ್ತ ಪರೀಕ್ಷೆಯ ಮಾರ್ಗದರ್ಶನದ ಮೇರೆಗೇ ಸಪ್ಲಿಮೆಂಟ್‌ಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ.
ವಯಸ್ಸಿನ ಪ್ರಕಾರ ಯಾರಿಗೆ ಎಷ್ಟು ವಿಟಮಿನ್ ಡಿ ಅಗತ್ಯವಿದೆ ಎಂದು ತಿಳಿಯಿರಿ
0-12 ತಿಂಗಳುಗಳು – 10mcg
1-13 ವರ್ಷಗಳು – 15mcg
14 -18 ವರ್ಷಗಳು – 15mcg (ಗರ್ಭಿಣಿ ಮಹಿಳೆಯರಿಗೆ 15mcg)
19-50 ವರ್ಷಗಳು – 15mcg (ಗರ್ಭಿಣಿ ಮಹಿಳೆಯರಿಗೆ 15mcg)
51-70 ವರ್ಷಗಳು – 15mcg
70 – 20mcg ಗಿಂತ ಹೆಚ್ಚು

