ಚೆನ್ನೈ: ಖಾಸಗಿ ಶಾಲೆಗಳಿಗೆ ಸಂಬಂಧಿಸಿದ 100 ಕೋಟಿ ರೂಪಾಯಿ ಮೌಲ್ಯದ ಹಗರಣವೊಂದಕ್ಕೆ ಸಂಬಂಧಿಸಿದಂತೆ, ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ನಾಯಕ ಹಾಗೂ ತಮಿಳುನಾಡಿನ ಮಾಜಿ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಶಾಲೆಗಳಿಗೆ ಹಣದ ಬದಲಾಗಿ ಮಾನ್ಯತೆ ಮತ್ತು ಕಾನೂನುಬದ್ಧ ಅನುಮತಿಗಳನ್ನು ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಮದ್ರಾಸ್ ಹೈಕೋರ್ಟ್ ಇವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ, ಗ್ರೇಟರ್ ಚೆನ್ನೈ ಪೊಲೀಸರ ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿಬಿ) ಅವರನ್ನು ಬಂಧಿಸಿದೆ.
1,000ಕ್ಕೂ ಹೆಚ್ಚು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಹಣ ಸಂಗ್ರಹಿಸಿದ ಆರೋಪ
2021 ರಿಂದ 2026 ರವರೆಗೆ ಶಾಲಾ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ, ಖಾಸಗಿ ಶಾಲೆಗಳಿಗೆ ಶಾಶ್ವತ ಮಾನ್ಯತೆ ಮತ್ತು ಇತರ ಆಡಳಿತಾತ್ಮಕ ಅನುಮೋದನೆಗಳನ್ನು ನೀಡುವ ಭರವಸೆ ನೀಡಿ, 1,000ಕ್ಕೂ ಹೆಚ್ಚು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ‘ಪಕ್ಷದ ನಿಧಿ'(party fund) ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾರೆ ಎಂಬ ಆರೋಪ ಮಹೇಶ್ ಅವರ ಮೇಲಿದೆ. ಸಿಸಿಬಿ ದಾಖಲಿಸಿರುವ ಎಫ್‌ಐಆರ್ ನಲ್ಲಿ ‘ಭ್ರಷ್ಟಾಚಾರ ತಡೆ ಕಾಯ್ದೆ’ಯ (Prevention of Corruption Act – PCA) ಅಡಿಯಲ್ಲಿನ ಆರೋಪಗಳೂ ಸೇರಿವೆ.
ಈ ಹಗರಣಕ್ಕೆ ಸಂಬಂಧಿಸಿದ ಹಣದ ವರ್ಗಾವಣೆ (money trail) ಕುರಿತು ತನಿಖೆ ನಡೆಸಲು, ಜಾರಿ ನಿರ್ದೇಶನಾಲಯವು (ED) ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ಯ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಪೊಲೀಸರಿಂದ ಅನ್ಬಿಲ್ ಮಹೇಶ್ ವಿಚಾರಣೆ
ಕಳೆದ ತಿಂಗಳು, ಖಾಸಗಿ ಶಾಲೆಗಳಿಗೆ ಅನುಮೋದನೆ ನೀಡುವಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ದಿನವಿಡೀ ನಡೆದ ಈ ಸುದೀರ್ಘ ವಿಚಾರಣೆಯಲ್ಲಿ, ಹಗರಣದಲ್ಲಿ ಹೆಸರಿಸಲಾದ ಪ್ರಮುಖ ವ್ಯಕ್ತಿಗಳೊಂದಿಗೆ ಮಹೇಶ್ ಅವರಿಗಿರುವ ನಂಟು, ಪಕ್ಷದ ದೇಣಿಗೆಯ ಸೋಗಿನಲ್ಲಿ ನಡೆದಿದೆ ಎಂದು ಶಂಕಿಸಲಾದ ಹಣ ವರ್ಗಾವಣೆ ಮತ್ತು ಸಂಬಂಧಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಬ್ಯಾಂಕ್ ವಹಿವಾಟುಗಳ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನಿಸಿದರು.
ಇತ್ತೀಚಿನ ಶೋಧ ಕಾರ್ಯಾಚರಣೆಗಳ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆಯೂ ಅವರನ್ನು ಪ್ರಶ್ನಿಸಲಾಯಿತು. ಅವರ ಹೇಳಿಕೆಗಳನ್ನು ತನಿಖಾ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಿಸಿಕೊಳ್ಳಲಾಗಿದೆ.
ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಶಾಶ್ವತ ಮಾನ್ಯತೆ ಕೊಡಿಸುವುದಾಗಿ ಭರವಸೆ ನೀಡಿ, ಆಡಳಿತ ಮಂಡಳಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಯಿತು.
ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿಬಿ) ಪ್ರಕರಣ ದಾಖಲಿಸಿಕೊಂಡು, ಸುಲಿಗೆ ಮತ್ತು ನಂಬಿಕೆ ದ್ರೋಹ (criminal breach of trust) ಎಸಗಿದ ಆರೋಪದ ಮೇಲೆ ಬಿ.ಟಿ. ಅರಸಕುಮಾರ್, ಸುರೇಶ್ ಮತ್ತು ರಾಜಾ ಎಂಬ ಮೂವರನ್ನು ಈ ಹಿಂದೆ ಬಂಧಿಸಿತ್ತು. ಬಂಧಿತ ವ್ಯಕ್ತಿಗಳ ವಿಚಾರಣೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳ ಆಧಾರದ ಮೇಲೆ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪೊಯ್ಯಮೊಳಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡರು.
ಸೆಪ್ಟೆಂಬರ್ 16 ರಂದು, ಚೆನ್ನೈ ಮತ್ತು ತಿರುಚಿರಾಪಳ್ಳಿಯಲ್ಲಿ ಮಾಜಿ ಸಚಿವರು ಹಾಗೂ ಅವರ ಸಹಚರರಿಗೆ ಸಂಬಂಧಿಸಿದ ಒಂಬತ್ತು ಸ್ಥಳಗಳಲ್ಲಿ ಸಿಸಿಬಿ (CCB) ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿದವು. ಈ ಶೋಧ ಕಾರ್ಯಾಚರಣೆಯ ವೇಳೆ ಆಸ್ತಿ ಪತ್ರಗಳು, ಬ್ಯಾಂಕ್ ದಾಖಲೆಗಳು, ಹಣಕಾಸು ಸಾಧನಗಳು ಮತ್ತು ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು.

