ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ. ಜನರು ತಾವು ಇರುವ ಸಾರ್ವಜನಿಕ ಸ್ಥಳಗಳ ಗಾಂಭೀರ್ಯವನ್ನು ಮರೆತು ಅಶಿಸ್ತಿನಿಂದ ವರ್ತಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಬಸ್ ಹಾಗೂ ರೈಲ್ವೆ ಕೋಚ್‌ಗಳಲ್ಲಿ ಜನದಟ್ಟಣೆ ಮತ್ತು ಕಿಡಿಗೇಡಿಗಳ ಅಸಭ್ಯ ವರ್ತನೆ ಕುರಿತು ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಇದೀಗ ಯುವಕರ ಗುಂಪೊಂದು ಚಲಿಸುವ ರೈಲಿನ ಎಸಿ ಕೋಚ್ ಅನ್ನು ತಾವೇ ಸ್ವಂತ ಹಣ ಕೊಟ್ಟು ಖರೀದಿಸಿದ ಪರ್ಸನಲ್ ಬಾರ್ ಎಂಬಂತೆ ಪರಿವರ್ತಿಸಿ ಮದ್ಯ ತಯಾರಿಸುತ್ತಿರುವ ಆಘಾತಕಾರಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರೈಲು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಕಳವಳಗಳನ್ನು ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಚಲಿಸುವ ರೈಲಿನ ಎಸಿ ಕೋಚ್ ಒಳಗೆ ಉಳಿದ ಪ್ರಯಾಣಿಕರೆಲ್ಲಾ ತಮ್ಮ ತಮ್ಮ ಸೀಟುಗಳಲ್ಲಿ ಶಾಂತವಾಗಿ ಕುಳಿತಿರುವುದನ್ನು ಕಾಣಬಹುದು. ಆದರೆ ಅಲ್ಲೇ ಇದ್ದ ಯುವಕರ ಗುಂಪಿನಲ್ಲೊಬ್ಬ, ರೈಲಿನ ಸೀಟಿನ ಪರದೆಯ (Curtain) ಹಿಂದೆ ಅಡಗಿ ಕುಳಿತು ಇತರರಿಗೆ ಕಾಣದಂತೆ ಒಂದು ಬಾಟಲಿಯಿಂದ ಮತ್ತೊಂದು ಬಾಟಲಿಗೆ ಮದ್ಯವನ್ನು ಹಾಕಿ ಮಿಶ್ರಣ ಮಾಡುತ್ತಿದ್ದ. ಇನ್ನುಳಿದ ಆತನ ಸ್ನೇಹಿತರು ಈ ಇಡೀ ಕೃತ್ಯವನ್ನು ಹೆಮ್ಮೆಯಿಂದ ವಿಡಿಯೋ ರೆಕಾರ್ಡ್ ಮಾಡುತ್ತಾ ಹರಟೆ ಹೊಡೆಯುತ್ತಿದ್ದರು.
ಇವರ ಆಧಾರ್ ಕಾರ್ಡ್ ಬ್ಲಾಕ್ ಮಾಡಿ”: ನೆಟ್ಟಿಗರ ಆಕ್ರೋಶ
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಭಾರತೀಯ ನೆಟ್ಟಿಗರು ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭಾರತೀಯರಲ್ಲಿ ನಿಯಮಗಳು ಮತ್ತು ನೈತಿಕತೆಗಳು ಈಗ ಕೇವಲ ಪುಸ್ತಕಗಳಲ್ಲಿ ಮಾತ್ರ ಉಳಿದುಕೊಂಡಿವೆ, ಜನರ ರಕ್ತದಲ್ಲಿ ಬೇರೂರಿಲ್ಲ” ಎಂದು ಹಲವರು ಕಟುವಾಗಿ ಟೀಕಿಸಿದ್ದಾರೆ. ರೈಲು ಪ್ರಯಾಣದಲ್ಲಿ ಇಷ್ಟೆಲ್ಲಾ ಕಠಿಣ ನಿಯಮಗಳಿದ್ದರೂ ಇಂತಹ ವರ್ತನೆ ತೋರಲು ಇವರಿಗೆ ಧೈರ್ಯ ಎಲ್ಲಿಂದ ಬರುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಕೋಪಗೊಂಡ ಇಂಟರ್ನೆಟ್ ಬಳಕೆದಾರರೊಬ್ಬರು, “ದಯವಿಟ್ಟು ಅಧಿಕಾರಿಗಳು ಈ ವ್ಯಕ್ತಿಗಳು ಇನ್ನು ಮುಂದೆ ಜೀವನದಲ್ಲಿ ರೈಲು ಟಿಕೆಟ್ ಬುಕ್ ಮಾಡದಂತೆ ಕಪ್ಪು ಪಟ್ಟಿಗೆ ಸೇರಿಸಿ ನಿಷೇಧಿಸಬೇಕು ಮತ್ತು ಇವರ ಆಧಾರ್ ಕಾರ್ಡ್ ಅನ್ನು ನಿರ್ಬಂಧಿಸಬೇಕು” ಎಂದು ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರೈಲ್ವೆ ಸೇವಾ (Railway Seva) ಖಾತೆಯು ಟ್ವಿಟರ್ (X) ಮೂಲಕ ತಕ್ಷಣವೇ ಪ್ರತಿಕ್ರಿಯೆ ನೀಡಿದೆ. ಈ ಗಂಭೀರ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ರೈಲು ಸಂಖ್ಯೆ, ಕೋಚ್ ನಂಬರ್ ಸೇರಿದಂತೆ ಪ್ರಮುಖ ವಿವರಗಳನ್ನು ನೀಡುವಂತೆ ವಿಡಿಯೋ ಪೋಸ್ಟ್ ಮಾಡಿದವರಿಂದ ಕೇಳಿದೆ.

