HomeKarnatakaಸುಳ್ಳು ಆದಾಯ ಪ್ರಮಾಣ ಪತ್ರ ನೀಡಿ ಸರ್ಕಾರಿ ಹುದ್ದೆ ಪಡೆಯಲು ಯತ್ನ: KPSC ಅಧ್ಯಕ್ಷರ ಪುತ್ರಿ...

ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿ ಸರ್ಕಾರಿ ಹುದ್ದೆ ಪಡೆಯಲು ಯತ್ನ: KPSC ಅಧ್ಯಕ್ಷರ ಪುತ್ರಿ ವಿರುದ್ಧ ಎಫ್ಐಆರ್

ಬೆಂಗಳೂರು: ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಕುಟುಂಬದ ಆದಾಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿ ಸರ್ಕಾರದ ಹುದ್ದೆ ಗಿಟ್ಟಿಸಲು ಪ್ರಯತ್ನಿಸಿದ ಆರೋಪದ ಮೇಲೆ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ಬಗ್ಗೆ ಕೆಪಿಎಸ್ಸಿ ಕಾರ್ಯದರ್ಶಿಗಳು ಶುಕ್ರವಾರ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಸುಮಾ ಎಸ್. ಸಾಹುಕಾರ ಅರ್ಜಿ ಸಲ್ಲಿಸಿ 3ಬಿ ಮೀಸಲಾತಿ ಕೋರಿದ್ದರು. ಪರೀಕ್ಷೆ ಬರೆದು ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರ ಮೂಲ ದಾಖಲೆಗಳ ಪರಿಶೀಲನೆ ನಡೆಸಿದಾಗ ಆದಾಯ ವಿವರದಲ್ಲಿ ತಪ್ಪು ಮಾಹಿತಿ ಸಲ್ಲಿಸಿರುವುದು ಕಂಡುಬಂದಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಭ್ಯರ್ಥಿ ಸುಮಾ ಅವರು ಸಲ್ಲಿಸಿದ್ದ 3ಬಿ ಮೀಸಲಾತಿ ಪ್ರಮಾಣ ಪತ್ರದಲ್ಲಿ ತಮ್ಮ ಕುಟುಂಬದ ಒಟ್ಟು ವಾರ್ಷಿಕ ಆದಾಯ 40,000 ರೂ. ಎಂದು ನಮೂದಿಸಿದ್ದರು. ಆದರೆ ಅವರ ತಂದೆ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು 2019ರಿಂದ ಕೆಪಿಎಸ್ಸಿ ಸದಸ್ಯರಾಗಿ ಮಾಸಿಕ ಮೂಲವೇತನ 2.05 ಲಕ್ಷ ರೂ., 2021 ರಿಂದ ಕೆಪಿಎಸ್ಸಿ ಅಧ್ಯಕ್ಷರಾಗಿ ಮಾಸಿಕ ಮೂಲವೇತನ 2.25 ಲಕ್ಷ ರೂಪಾಯಿ ಇದ್ದು, ಇದರೊಂದಿಗೆ ಇತರೆ ಭತ್ಯೆಗಳನ್ನು ಕೂಡ ಪಡೆಯುತ್ತಿದ್ದು, ಈ ವಿಚಾರಗಳನ್ನು ರಾಜ್ಯಪಾಲರಿಗೆ ಸಲ್ಲಿಸಿರುವ ಅವರ ಆಸ್ತಿ ವಿವರಗಳಲ್ಲಿಯೂ ಉಲ್ಲೇಖಿಸಲಾಗಿದೆ.

ಸರ್ಕಾರದ ನಿಯಮಾವಳಿ ಪ್ರಕಾರ ಹಿಂದುಳಿದ ವರ್ಗಗಳ 3ಬಿ ಮೀಸಲಾತಿ ಮತ್ತು ಕೆನೆಪದರ ರಹಿತ ಸೌಲಭ್ಯ ಪಡೆಯಲು ವಾರ್ಷಿಕ ಆದಾಯ 8 ಲಕ್ಷ ರೂ. ಒಳಗಿರಬೇಕು. ಆದರೆ ಅಭ್ಯರ್ಥಿಯ ಕುಟುಂಬದ ಆದಾಯ ಈ ಮಿತಿಗಿಂತ ಹೆಚ್ಚಾಗಿದೆ. ಈ ಮೂಲಕ ಸುಮಾ ಎಸ್. ಸಾಹುಕಾರ್ ಅವರು ಸುಳ್ಳು ಮಾಹಿತಿಯೊಂದಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular