ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ದದೂನಿ ಗ್ರಾಮದಲ್ಲಿ ವಿಸ್ಮಯಕರ ಹಾಗೂ ನಗು ತರಿಸುವ ಘಟನೆಯೊಂದು ವರದಿಯಾಗಿದೆ. ಸುಮಾರು 50 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲೇರಿದ ಬೃಹತ್ ಗೂಳಿಯೊಂದು ಮೇಲೆಯೇ ಕುಳಿತು ಕೆಳಗೆ ಬರಲು ನಿರಾಕರಿಸಿದ ಘಟನೆ ಗ್ರಾಮಸ್ಥರನ್ನು ಆಶ್ಚರ್ಯಚಕಿತಗೊಳಿಸಿದೆ. ಈ ವಿಚಿತ್ರ ದೃಶ್ಯಾವಳಿಗಳ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನರು ನೀರಿನ ಟ್ಯಾಂಕ್ ಏರಿ ಪ್ರತಿಭಟನೆ ನಡೆಸುವುದನ್ನು ಕಂಡಿದ್ದ ಗ್ರಾಮಸ್ಥರು, ಗೂಳಿಯ ಈ ನಡೆಯನ್ನು ಕಂಡು “ನಿನ್ನ ಬೇಡಿಕೆಗಳೇನು ಸಾಮಿ, ಅದಕ್ಕಾಗಿಯೇ ಟ್ಯಾಂಕ್ ಏರಿ ಕುಳಿತಿದ್ದೀಯಾ?” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆದರೆ, ಬೃಹತ್ ಕಾಯದ ಈ ಗೂಳಿ ಸುಮಾರು 50 ಅಡಿ ಎತ್ತರದ ಟ್ಯಾಂಕ್ ಮೇಲಕ್ಕೆ ಹೇಗೆ ತಲುಪಿತು ಎಂಬುದು ಇಂದಿಗೂ ಯಾರಿಗೂ ತಿಳಿಯದ ರಹಸ್ಯವಾಗಿಯೇ ಉಳಿದಿದೆ.
ಟ್ಯಾಂಕ್ ಮೇಲಿದ್ದ ಗೂಳಿಗೆ ಆಹಾರ ಮತ್ತು ನೀರಿನ ಅಭಾವ ಉಂಟಾಗಬಾರದೆಂಬ ಕಾಳಜಿಯಿಂದ ಸೋಮವಾರ ರಾತ್ರಿ ಗ್ರಾಮಸ್ಥರೇ ಟ್ಯಾಂಕ್ ಮೇಲಕ್ಕೆ ನೀರು ಮತ್ತು ಮೇವನ್ನು ತಲುಪಿಸಿ ಸತ್ಕರಿಸಿದ್ದಾರೆ. ಇಷ್ಟೊಂದು ಎತ್ತರದಿಂದ ಗೂಳಿ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದರೆ ಅದರ ಪ್ರಾಣಕ್ಕೆ ಅಪಾಯವಿರುವುದರಿಂದ ಹಳ್ಳಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ಮಾನ್‌ಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎತ್ತರದ ಪ್ರದೇಶದಿಂದ ಗೂಳಿಗೆ ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ಕೆಳಗೆ ಇಳಿಸಲು ಅಧಿಕಾರಿಗಳು ತನಿಖೆ ಹಾಗೂ ಕಾರ್ಯಾಚರಣೆ ಕೈಗೊಂಡಿದ್ದಾರೆ.

