HomeIndiaರೀಲ್ಸ್ ಗಾಗಿ 30 ಅಡಿ ಎತ್ತರದಿಂದ ಡ್ಯಾಮ್‌ಗೆ ಜಿಗಿದ ಯುವಕ‌ ; ಎರಡೂ ಕಾಲುಗಳು ಮುರಿದು...

ರೀಲ್ಸ್ ಗಾಗಿ 30 ಅಡಿ ಎತ್ತರದಿಂದ ಡ್ಯಾಮ್‌ಗೆ ಜಿಗಿದ ಯುವಕ‌ ; ಎರಡೂ ಕಾಲುಗಳು ಮುರಿದು ನರಳಾಟ | Video

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಹಾಗೂ ಪುಟ್ಟ ವಿಡಿಯೋ ತುಣುಕುಗಳನ್ನು ಮಾಡಿ ಮೆಚ್ಚುಗೆ ಪಡೆಯಲು ಯುವಜನತೆ ಎಂತಹ ಅಪಾಯಕಾರಿ ಸಾಹಸಗಳಿಗೂ ಕೈಹಾಕುತ್ತಿದ್ದಾರೆ ಎಂಬುದಕ್ಕೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಈ ಆಘಾತಕಾರಿ ಘಟನೆಯೇ ಸಾಕ್ಷಿ. ವಿಡಿಯೋಗಾಗಿ ಮೂವತ್ತು ಅಡಿ ಎತ್ತರದಿಂದ ಅಣೆಕಟ್ಟಿನ ನೀರಿಗೆ ಜಿಗಿದ ಮೂವತ್ತೆರಡು ವರ್ಷದ ಯುವಕನೊಬ್ಬ, ನೀರಿನಡಿಯಲ್ಲಿದ್ದ ಬಂಡೆಕಲ್ಲುಗಳಿಗೆ ಬಲವಾಗಿ ಅಪ್ಪಳಿಸಿ ಎರಡೂ ಕಾಲುಗಳನ್ನು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾನೆ.

ಝಾನ್ಸಿಯ ನಿವಾಸಿ ಪುಷ್ಪೇಂದ್ರ ಕುಮಾರ್ ಮನೋರಿಯಾ ಎಂಬಾತನೇ ಈ ದುಸ್ಸಾಹಸಕ್ಕೆ ಕೈಹಾಕಿ ಗಂಭೀರವಾಗಿ ಗಾಯಗೊಂಡ ದುರ್ದೈವಿ.

ಭಾನುವಾರ ಸಂಜೆ ಪುಷ್ಪೇಂದ್ರ ತನ್ನ ಸ್ನೇಹಿತರ ಗುಂಪಿನೊಂದಿಗೆ ಪ್ರಸಿದ್ಧ ಪಹುಜ್ ಅಣೆಕಟ್ಟನ್ನು ವೀಕ್ಷಿಸಲು ತೆರಳಿದ್ದ. ಅಲ್ಲಿ ವಿಡಿಯೋ ಮಾಡುವ ಉದ್ದೇಶದಿಂದ ಎತ್ತರದ ವೀಕ್ಷಣಾ ಗೋಪುರದ ಬಳಿ ತೆರಳಿ, ಸಾರ್ವಜನಿಕರ ರಕ್ಷಣೆಗಾಗಿ ಹಾಕಲಾಗಿದ್ದ ಸುರಕ್ಷತಾ ಬೇಲಿಯನ್ನು ದಾಟಿ ನಿಂತಿದ್ದಾನೆ. ಈ ವೇಳೆ ಆತನ ಸ್ನೇಹಿತರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುತ್ತಾ ತಮಾಷೆ ಮಾಡುತ್ತಿದ್ದರು. ಪುಷ್ಪೇಂದ್ರ ಜಿಗಿಯುವ ಕ್ಷಣದಲ್ಲೇ ಸ್ನೇಹಿತನೊಬ್ಬ ನಗುತ್ತಾ ಆತನನ್ನು ಹೀಯಾಳಿಸುವ ಮಾತುಗಳನ್ನಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ನೇಹಿತರ ಸಮ್ಮುಖದಲ್ಲೇ ಪುಷ್ಪೇಂದ್ರ ಮೂವತ್ತು ಅಡಿ ಎತ್ತರದಿಂದ ಕೆಳಕ್ಕೆ ಜಿಗಿದಿದ್ದಾನೆ. ಆದರೆ, ಆತ ಲೆಕ್ಕಾಚಾರ ಹಾಕಿದಂತೆ ಅಲ್ಲಿ ಆಳವಾದ ನೀರು ಇರಲಿಲ್ಲ. ನೀರಿನ ಮಟ್ಟ ಅತ್ಯಂತ ಕಡಿಮೆಯಿದ್ದು, ಕೆಳಭಾಗದಲ್ಲಿ ಬೃಹತ್ ಬಂಡೆಕಲ್ಲುಗಳಿದ್ದವು. ನೇರವಾಗಿ ಬಂಡೆಗಳ ಮೇಲೆ ಅಪ್ಪಳಿಸಿದ ಪರಿಣಾಮವಾಗಿ ಆತನ ಎರಡೂ ಕಾಲುಗಳ ಮೂಳೆಗಳು ಛಿದ್ರಗೊಂಡಿವೆ. ನೀರಿನಿಂದ ಮೇಲೆ ಬರಲಾಗದೆ, ನಿಲ್ಲಲೂ ಸಾಧ್ಯವಾಗದೆ ನರಳಾಡಿದ ಆತ, ತೀವ್ರ ನೋವಿನ ನಡುವೆಯೂ ಕೈಗಳ ಸಹಾಯದಿಂದ ಈಜುತ್ತಾ ಬಂದು ಅಣೆಕಟ್ಟಿನ ಬಳಿಯಿದ್ದ ಕಬ್ಬಿಣದ ಸರಳನ್ನು ಹಿಡಿದು ದಡಕ್ಕೆ ತಲುಪಿದ್ದಾನೆ.

ಕೂಡಲೇ ಸ್ಥಳೀಯರು ಧಾವಿಸಿ ಆತನನ್ನು ನೀರಿನಿಂದ ಹೊರತೆಗೆದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಕುಟುಂಬಸ್ಥರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಲುಗಳಿಗೆ ಭಾರಿ ಪೆಟ್ಟಾಗಿದ್ದ ಕಾರಣ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಒಂದು ಕಾಲಿಗೆ ಎರಡು ಲೋಹದ ರಾಡ್‌ಗಳನ್ನು ಅಳವಡಿಸಿದ್ದಾರೆ. ಮತ್ತೊಂದು ಕಾಲಿಗೂ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ಹಾಸಿಗೆಯಲ್ಲಿ ನೋವಿನಿಂದ ನರಳುತ್ತಿರುವ ಪುಷ್ಪೇಂದ್ರ, “ನಾನು ಈ ಹಿಂದೆಯೂ ಇಂತಹ ಜಿಗಿತಗಳನ್ನು ಬೇರೆಡೆ ಮಾಡಿದ್ದೆ. ಇಲ್ಲಿಯೂ ನೀರು ಆಳವಾಗಿದೆ ಎಂದುಕೊಂಡಿದ್ದೆ. ಆದರೆ ನೀರು ಕಡಿಮೆ ಇದ್ದು ಕಲ್ಲುಗಳಿರುವುದು ತಿಳಿಯಲಿಲ್ಲ. ಜೀವನದಲ್ಲಿ ಇನ್ನೆಂದೂ ಇಂತಹ ಹುಚ್ಚು ಸಾಹಸಕ್ಕೆ ಕೈಹಾಕುವುದಿಲ್ಲ” ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ.

ಈ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಯುವಕನ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹದಿನೈದು ಸೆಕೆಂಡುಗಳ ಪ್ರಚಾರದ ಹುಚ್ಚಿಗೆ ಇಡೀ ಜೀವನವನ್ನೇ ಆಸ್ಪತ್ರೆಯ ಪಾಲು ಮಾಡಿಕೊಂಡ ಎಂದು ಹಲವರು ವ್ಯಂಗ್ಯವಾಡಿದ್ದರೆ, ಇಂತಹ ಅಪಾಯಕಾರಿ ಹುಚ್ಚಾಟಗಳಿಗೆ ಕಡಿವಾಣ ಬೀಳಲೇಬೇಕು ಎಂದು ಹಲವರು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular