ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ, ಬೆಳಗಾವಿಯ ಗೋಕಾಕ್ ನಲ್ಲಿರುವ ನಿವಾಸ, ಮಗ ರಾಹುಲ್ ಗೆ ಸಂಬಂಧಿಸಿದ ಜಾಗ ಹಾಗೂ ಸತೀಶ್ ಜಾರಕಿಹೊಳಿ ಅವರ ಆಪ್ತರ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಇಡಿ ದಾಲಿ ಬೆನ್ನಲ್ಲೇ ದಾಳಿಯ ಹಿಂದಿನ ಕಾರಣಗಳು ಹೊರಬಿದ್ದಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ.
ಸಚಿವ ಸತೀಶ್ ಜಾರಕಿಹೊಳಿ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸತೀಶ್ ಜಾರಕಿಹೊಳಿ ಆಫ್ರಿಕಾದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ವ್ಯವಹಾರದಲ್ಲಿ ಭಾರಿ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ ಎನ್ನಲಾಗಿದೆ.
ಆಫ್ರಿಕಾದಲ್ಲಿ ಅಸ್ತಿತ್ವದಲ್ಲಿರುವ ಈ ಗಣಿಗಾರಿಕೆ ಕಂಪನಿಗೆ ಪುತ್ರ ರಾಹುಲ್ ಜಾರಕಿಹೊಳಿ ನಿರ್ದೇಶಕರಾಗಿದ್ದು, ಸತೀಶ್ ಜಾರಕಿಹೊಳಿ ಅವರ ಸಹೋದರಿ ಲಕ್ಷ್ಮಿ ಕೂಡ ನಿರ್ದೇಶಕಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಕ್ಷ್ಮಿ ಅವರ ಪತಿ ಮಂಜುನಾಥ್ ಅಬಕಾರಿ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿದ್ದು ಇವರ ಮನೆ ಮೇಲೂ ಎರಡನೇ ಬಾರಿಗೆ ಇಡಿ ದಾಳಿ ನಡೆದಿದೆ.
ಅಕ್ರಮವಾಗಿ ವಿದೇಶಕ್ಕೆ ಹಣ ವರ್ಗಾವಣೆ ಮಾಡಿ, ಕುಟುಂಬಸ್ಥರ ಹೆಸರಿನಲ್ಲಿ ವಿದೇಶಿ ಕಂಪನಿಗಳನ್ನು ಹುಟ್ಟುಹಾಕಿರುವ ಹಣಕಾಸು ಜಾಲದ ಕುರಿತು ಇಡಿ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಫೆಮಾ (FEMA) ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯಾಗಿದ್ದು, ಇದು ಭಾರತದಲ್ಲಿ ವಿದೇಶಿ ಕರೆನ್ಸಿ ವಹಿವಾಟುಗಳು, ವಿದೇಶಿ ಹೂಡಿಕೆಗಳು ಮತ್ತು ಗಡಿಯಾಚೆಗಿನ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಅತ್ಯಂತ ಪ್ರಮುಖವಾದ ಕಾನೂನಾಗಿದೆ.
ಬ್ಯಾಂಕುಗಳು ನೀಡುವ ಅನುಮಾನಾಸ್ಪದ ವಿದೇಶಿ ವಹಿವಾಟುಗಳ ವರದಿ, ಅಕ್ರಮ ಹವಾಲಾ ದಂಧೆಯ ಸುಳಿವು, ಅಥವಾ ವಿದೇಶಿ ನೇರ ಹೂಡಿಕೆಯಲ್ಲಿ (FDI) ನಿಯಮ ಉಲ್ಲಂಘನೆಯ ದೂರುಗಳು ಬಂದಾಗ ಇಡಿ ಸ್ವತಃ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತದೆ.
ಸಚಿವ ಸತೀಶ್ ಜಾರಕಿಹೊಳಿ ಆಪ್ತರ ಮನೆ ಮೇಲೂ ಇಡಿ ದಾಳಿ: ಬೆಳಗಾವಿಯ 5 ಕಡೆ ರೇಡ್
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಗೋಕಾಕ್‌ನಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ ಸತೀಶ್ ಜಾರಕಿಹೊಳಿ ಅವರ ಬಾಮೈದ ಮಂಜುನಾಥ್ ಹಾಗೂ ಜಾರಕಿಹೊಳಿ ಆಪ್ತರ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಬಕಾರಿ ಪರವಾನಗಿ ಹಗರಣಕ್ಕೆ ಸಂಬಂಧಿಸಿದಂತೆ ಹಾಗೂ ವಿದೇಶಿ ಅಕ್ರಮ ಹಣ, ಹವಾಲಾ ಜಾಲದ ನಂಟು ಅನುಮಾನದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಇಂದು ಮುಂಜಾನೆಯೇ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅತ್ತ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿರುವ ಮನೆ, ಕಚೇರಿ ಮಗಳು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಚೇರಿ, ಮಗ ರಾಹುಲ್ ಜಾರಕಿಹೊಳಿಗೆ ಸೇರಿದ ಜಾಗಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಬಾಮೈದ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮನೆ ಮೇಲೆ ಎರಡನೇ ಬಾರಿ ಇಡಿ ದಾಳಿ ನಡೆದಿದೆ. ಕಳೆದ ಜೂನ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಮಂಜುನಾಥ್ ಅವರ ಮನೆ, ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಅಥಣಿ ಪ್ರದೇಶಗಳಲ್ಲಿ ಇಡಿ ಸುದೀರ್ಘ ದಾಳಿ ನಡೆಸಿತ್ತು.
ಬಾರ್ ಲೈಸೆನ್ಸ್ ನೀಡುವಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ನಡೆದಿದ್ದ ಆ ಕಾರ್ಯಾಚರಣೆಯ ವೇಳೆ ಮಂಜುನಾಥ್ ಮನೆಯಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್, 5.5 ಲಕ್ಷ ರೂ. ನಗದು ಹಾಗೂ ಬರೋಬ್ಬರಿ 13.3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ಅಲ್ಲದೇ ಮಂಜುನಾಥ್ ನಿವಾಸದಲ್ಲಿ ಡೈರಿಯೊಂದು ಪತ್ತೆಯಾಗಿತ್ತು. ಈ ಡೈರಿ ಆಧಾರದ ಮೇಲೆ ಜೂನ್ 24ರಿಂದ ಇ.ಡಿ. ಅಧಿಕಾರಿಗಳು ಕೂಲಂಕುಷ ತನಿಖೆ ನಡೆಸಿದ್ದು, ಮಹತ್ವದ ಸುಳಿವು ದೊರೆತಿದೆ ಎನ್ನಲಾಗಿದೆ. ಡೈರಿಯಲ್ಲಿನ ಮಾಹಿತಿಯನ್ನಾಧರಿಸಿ ಸತೀಶ್ ಜಾರಕಿಹೊಳಿ ಅವರ ಪಾತ್ರದ ಬಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿ ಆಪ್ತರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಾ.ಗಿರೀಶ್ ಸೋನ್ವಾಲಕರ್, ರಾಜು ಧರಮಶೆಟ್ಟಿ ಹಾಗೂ ವಿಠಲ ಪರಸನ್ನವರ್ ಅವರ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.
ಡಾ. ಗಿರೀಶ್ ಸೋನ್ವಾಲಕರ್ ಅವರ ಬೆಳಗಾವಿ ನಗರದ ಲಕ್ಷ್ಮೀ ಟೇಕ್ ನಲ್ಲಿರುವ ನಿವಾಸ, ರಾಜು ಧರಮಶೆಟ್ಟಿ ಅವರ ಗೋಕಾಕ್ ನಿವಾಸ ಹಾಗೂ ವಿಠಲ ಪರಸನ್ನವರ್ ಅವರ ಗೋಕಾಕ್ ನಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ

