ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ಸಿ. ಜೋಸೆಫ್ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಗತ್ಯ ಸಂಖ್ಯಾ ಬಲಕೊರತೆ ಹಿನ್ನೆಲೆಯಲ್ಲಿ ಬೇರೆ ಬೇರೆ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿದೆ. ಆದರೆ ಈಗ ಸರ್ಕಾರಕ್ಕೆ ಆರಂಭದಲ್ಲೇ ಸಮಸ್ಯೆ ಎದುರಾಗಿದೆ.
ವಿಜಯ್ ಅವರಿಗೆ, ಈಗ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಳ್ಳುವ ನೇರ ಎಚ್ಚರಿಕೆ ನೀಡಿವೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಸ್ಥಾನಗಳು ಕಡಿಮೆಯಿದ್ದ ಕಾರಣ ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ, ಮತ್ತು ಐಯುಎಂಎಲ್ ಪಕ್ಷಗಳು ವಿಜಯ್ ಅವರಿಗೆ ಬೆಂಬಲ ನೀಡಿದ್ದವು.
ತಮ್ಮ ಸರ್ಕಾರವನ್ನು ಮತ್ತಷ್ಟು ಸ್ಥಿರಗೊಳಿಸುವ ಮತ್ತು ಬಲಪಡಿಸುವ ಉದ್ದೇಶದಿಂದ ಸಿಎಂ ವಿಜಯ್ ಅವರು, ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ (AIADMK) ಪಕ್ಷದಿಂದ ಬಂಡಾಯವೆದ್ದಿದ್ದ ಶಾಸಕರ ಬೆಂಬಲವನ್ನೂ ಪಡೆದಿದ್ದರು.
ಈಗ ಬೆಂಬಲ ನೀಡಿದ ಪಕ್ಷಗಳು ತಮಗೆ ಸಚಿವ ಸ್ಥಾನಬೇಕೆಂದು ಪಟ್ಟು ಹಿಡಿದಿದ್ದಾರೆ. ವಿಶೇಷವಾಗಿ ಎಐಎಡಿಎಂಕೆ ತಮನ್ನೂ ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ. ಈ ವಿಷಯವೇ ಈಗ ಮೈತ್ರಿಕೂಟದಲ್ಲಿ ಭಾರಿ ಸ್ಫೋಟಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ, ಸಿಎಂ ವಿಜಯ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಮಿಳುನಾಡು ಮತ್ತೊಂದು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿಲ್ಲದ ಕಾರಣ ಮತ್ತು ರಾಷ್ಟ್ರಪತಿ ಆಳ್ವಿಕೆ ಹೇರಿ ಬಿಜೆಪಿಯು ಹಿಂಬಾಗಿಲಿನಿಂದ ರಾಜ್ಯವನ್ನು ಆಳಬಾರದು ಎಂಬ ಒಂದೇ ಉದ್ದೇಶದಿಂದ ನಾವು ಟಿವಿಕೆಯನ್ನು ಬೆಂಬಲಿಸಿದ್ದೆವು. ಈ ಬಾರಿಯ ಜನಾಭಿಪ್ರಾಯ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಜಯ್ ಅವರು ಸ್ವಚ್ಛ ಮತ್ತು ಉತ್ತಮ ಸರ್ಕಾರ ನಡೆಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಅವರೇನಾದರೂ ಎಐಎಡಿಎಂಕೆಯ ಯಾವುದೇ ಬಣ ಅಥವಾ ಬಂಡಾಯ ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡರೆ, ಅದು ಜನಾದೇಶಕ್ಕೆ ಮಾಡುವ ದ್ರೋಹವಾಗುತ್ತದೆ. ಅಂತಹ ನಿರ್ಧಾರ ಕೈಗೊಂಡರೆ ನಾವು ಖಂಡಿತವಾಗಿಯೂ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲಿಸಿ, ವಾಪಸ್ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಸಿಎಂ ವಿಜಯ್ ಅವರು ಎಐಎಡಿಎಂಕೆ ಬಂಡಾಯ ಶಾಸಕರಿಗೆ ಮಣೆ ಹಾಕಿದರೆ, ಮೈತ್ರಿಕೂಟದಲ್ಲಿ ಭಾರಿ ಬಿರುಕು ಮೂಡುವುದು ನಿಶ್ಚಿತ. ಸಿಪಿಐಎಂ ಬೆಂಬಲ ಹಿಂತೆಗೆದುಕೊಂಡರೆ, ಕಾಂಗ್ರೆಸ್‌ನ 5 ಶಾಸಕರನ್ನು ಹೊರತುಪಡಿಸಿ, ಉಳಿದ ನಾಲ್ಕು ಮಿತ್ರಪಕ್ಷಗಳ ಒಟ್ಟು 8 ಶಾಸಕರು ತಕ್ಷಣವೇ ಸರ್ಕಾರದಿಂದ ಹೊರಬರಲಿದ್ದಾರೆ. ಈ ಪರಿಸ್ಥಿತಿಯಲ್ಲಿ ವಿಜಯ್ ಅವರು ಎಐಎಡಿಎಂಕೆಯ 25 ಬಂಡಾಯ ಶಾಸಕರು ಮತ್ತು ಎಎಂಎಂಕೆಯ ಒಬ್ಬ ಶಾಸಕರ ಬೆಂಬಲದೊಂದಿಗೆ ತಮ್ಮ ಸರ್ಕಾರವನ್ನು ತಾತ್ಕಾಲಿಕವಾಗಿ ಉಳಿಸಿಕೊಳ್ಳಬಹುದು.
ಒಟ್ಟಾರೆ ತಮಿಳುನಾಡು ನೂತನ ಸಿಎಂ ವಿಜಯ್ ಅವರಿಗೆ ಬೆಂಬಲ ಪಕ್ಷದ ಮನವೊಲಿಸುವುದು ದೊಡ್ಡಸವಾಲಾಗಿ ಪರಿಣಮಿಸಿದೆ.

