ನವದೆಹಲಿ- ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳಿಗೆ ಮಣ್ಣುಮುಕ್ಕಿಸಿ ತಮಿಳುನಾಡಿನ ಸಿಎಂ ಆಗಿರುವ ದಳಪತಿ ವಿಜಯ್ ಅವರು ರಾಷ್ಟ್ರ ರಾಜಕಾರಣದಲ್ಲೂ ಗಮನ ಸೆಳೆದಿದ್ದಾರೆ ಮಾತ್ರವಲ್ಲ ಮುಂದಿನ ಪ್ರಧಾನಿ ಯಾರು ಎಂಬ ಸಮೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದು ಸಂಚಲನ ಸೃಷ್ಟಿಸಿದ್ದಾರೆ..
ಇಂಡಿಯಾ ಟುಡೇ- ಸಿ ವೋಟರ್ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಭಾರತದ ಮುಂದಿನ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ವಿಜಯ್ 3ನೇ ಸ್ಥಾನಕ್ಕೆ ಜಿಗಿದಿದ್ದು, ದೇಶದ ಪ್ರಮುಖ ರಾಜಕೀಯ ದಿಗ್ಗಜರನ್ನೇ ಹಿಂದಿಕ್ಕಿದ್ದಾರೆ.
ಪ್ರಧಾನಿ ಸ್ಥಾನದಲ್ಲಿ ಎಂದಿನಿಂತೆ ನರೇಂದ್ರ ಮೋದಿ ಅವರು ಮುಂದಿದ್ದಾರೆ. ಮೋದಿ ಶೇ. 48.72. ರಾಹುಲ್ ಗಾಂಧಿ: ಶೇ. 27.13 ಜನಬೆಂಬಲ ಪಡೆದಿದ್ದರೆ, ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಅವರು ಶೇ. 9.24. ಮತ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಉಳಿದಂತೆ ಮಮತಾ ಬ್ಯಾನರ್ಜಿ ಶೇ. 2.05. ಅಖಿಲೇಶ್ ಯಾದವ್ ಶೇ. 1.76. ಅಭಿಜಿತ್ ದಿಪ್ಕೆ ಶೇ. 1.37 ಹಾಗೂ ಅರವಿಂದ್ ಕೇಜ್ರಿವಾಲ್ ಅವರು ಶೇ. 1.2ರಷ್ಟು ಮಾತ್ರ ಬೆಂಬಲ ಗಳಿಸಿದ್ದಾರೆ.
ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ
ದಶಕಗಳ ರಾಜಕೀಯ ಅನುಭವವಿರುವ ರಾಷ್ಟ್ರೀಯ ನಾಯಕರನ್ನು ವಿಜಯ್ ಹಿಂದಿಕ್ಕಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ವಿಜಯ್ ಅವರ ಜನಪ್ರಿಯತೆಯ ಹಠಾತ್ ಏರಿಕೆಯು ರಾಹುಲ್ ಗಾಂಧಿ ಅವರ ಮತಬ್ಯಾಂಕ್ ಮತ್ತು ಜನಪ್ರಿಯತೆಯ ಹಂಚಿಕೆಯ ಮೇಲೆಯೇ ಪ್ರಭಾವ ಬೀರಿರುವಂತೆ ಕಂಡುಬರುತ್ತಿದೆ.
ಪ್ರಧಾನಿ ಆಯ್ಕೆ ಮಾತ್ರವಲ್ಲದೆ, ಪ್ರಸ್ತುತ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಲು ಅತ್ಯಂತ ಸೂಕ್ತ ನಾಯಕ ಯಾರು? ಎಂಬ ಪ್ರಶ್ನೆಗೂ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ರಾಹುಲ್ ಗಾಂಧಿ ಶೇ. 29.0, ಸಿ. ಜೋಸೆಫ್ ವಿಜಯ್ ಶೇ. 12.2, ಮಮತಾ ಬ್ಯಾನರ್ಜಿ ಶೇ. 8.5, ಅರವಿಂದ್ ಕೇಜ್ರಿವಾಲ್ ಶೇ. 7.5, ಅಖಿಲೇಶ್ ಯಾದವ್ ಶೇ. 6.9 ರಷ್ಟು ಜನ ಬೆಂಬಲ ಸೂಚಿಸಿದ್ದಾರೆ.
ವಿಜಯ್ ಫಾರ್ ಪಿಎಂ: ಹೊಸ ಪಥಪ್ರದರ್ಶನ
2029ರ ಲೋಕಸಭಾ ಚುನಾವಣೆಗೆ ವಿಜಯ್ ಫಾರ್ ಪಿಎಂ ರಣಕಹಳೆ ಈಗಾಗಲೇ ಮೊಳಗಲು ಆರಂಭವಾಗಿದೆ. ತಮಿಳುನಾಡಿನಿಂದ ದೇಶದ ಪ್ರಧಾನಿ ಹೊರಹೊಮ್ಮಬೇಕು ಎಂಬ ಚರ್ಚೆಗೆ ಟಿವಿಕೆ ನಾಯಕರು ಈಗಾಗಲೇ ನಾಂದಿ ಹಾಡಿದ್ದಾರೆ.
ಆಗಸ್ಟ್ 18ರಂದು ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ್ದ ಮಾನವ ಸಂಪನ್ಮೂಲ ಸಚಿವ ಶರತ್‌ಕುಮಾರ್ ಅವರು ನಮ್ಮ ಹೃದಯ ಮತ್ತು ಸೇಂಟ್ ಜಾರ್ಜ್ ಕೋಟೆಯ ಮುಖ್ಯಮಂತ್ರಿಯಾಗಿರುವ ನಮ್ಮ ನಾಯಕರೇ ಭಾರತದ ಮುಂದಿನ ಪ್ರಧಾನಿ. ಹಗಲಿರುಳು ದುಡಿಯುತ್ತಿರುವ ನೀವೇ ಮುಂದಿನ ಪಿಎಂ ಎಂದು ನೇರವಾಗಿಯೇ ಪ್ರತಿಪಾದಿಸಿದ್ದರು.
ಲೋಕೋಪಯೋಗಿ ಸಚಿವ ಆದವ್ ಅರ್ಜುನ್ ಇಂಡಿಯಾ ಟುಡೇ ರೌಂಡ್‌ಟೇಬಲ್‌ನಲ್ಲಿ ಮಾತನಾಡಿ, ದಕ್ಷಿಣ ಭಾರತದಿಂದ, ಅದರಲ್ಲೂ ತಮಿಳುನಾಡಿನಿಂದಲೇ ಮುಂದಿನ ಪ್ರಧಾನಿ ಹೊರಹೊಮ್ಮಲಿದ್ದು, ಅವರು ಇಡೀ ದೇಶವನ್ನು ಸಮಾನವಾಗಿ ಪ್ರತಿನಿಧಿಸಲಿದ್ದಾರೆ ಎಂದಿದ್ದರು.
2029ರ ಚುನಾವಣೆಗೆ ವಿಜಯ್ ತಯಾರಿ
2024ರಲ್ಲಿ ಪಕ್ಷ ಕಟ್ಟಿ, 2026ರಲ್ಲಿ ಮೊದಲ ಚುನಾವಣೆಯಲ್ಲೇ ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ವಿಜಯ್ ಅವರ ರಾಜಕೀಯ ಗ್ರಾಫ್ ಅಭೂತಪೂರ್ವ ವೇಗದಲ್ಲಿ ಸಾಗುತ್ತಿದೆ. 2029ರ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷಗಳ ಸಮಯವಿದ್ದು, ಈ ಜನಪ್ರಿಯತೆಯನ್ನು ರಾಷ್ಟ್ರಮಟ್ಟದ ಚುನಾವಣಾ ಮೈತ್ರಿಯಾಗಿ ಪರಿವರ್ತಿಸುವುದು ದೊಡ್ಡ ಸವಾಲು. ಆದಾಗ್ಯೂ ವಿಜಯ್ ಕೇವಲ ತಮಿಳುನಾಡಿನ ಗಡಿಗೆ ಸೀಮಿತವಾಗದೆ ರಾಷ್ಟ್ರೀಯ ರಾಜಕೀಯ ಕಲ್ಪನೆಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ ಎಂಬುದನ್ನು ಈ ಸಮೀಕ್ಷೆ ದೃಢಪಡಿಸಿದೆ.

