ಬೆಂಗಳೂರು: ಪರಿಹಾರ ಕೊಡದೇ ಇದ್ದದ್ದಕ್ಕೆ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ರೈತರೊಬ್ಬರು ವಿಧನಸೌಧದ ಬಳಿ ಬಂದು ಅಲ್ಲಿದ್ದ ಶ್ರೀಗಂಧದ ಮರಗಳನ್ನು ಕಡಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ವಿಶುಕುಮಾರ್ ಎಂಬ ರೈತ ಇಂದು ವಿಧಾನಸೌಧದ ಬಳಿ ಇರುವ ಶ್ರೀಗಂಧದ ಮರಗಳನ್ನು ಕಡಿದು ಪ್ರತಿಭಟನೆ ವ್ಯಕ್ತಪಡಿಸಿದರು.
ಅಭಿವೃದ್ಧಿ ಹೆಸರಲ್ಲಿ ವಿಶುಕುಮಾರ್ ಅವರ ಜಮೀನಲ್ಲಿದ್ದ 30 ಮರಗಳನ್ನು ಅಧಿಕಾರಿಗಳು ಕಡಿದಿದ್ದರಂತೆ. ಅದಕ್ಕೆ ಪರಿಹಾರವನ್ನು ನೀಡದೇ ಸತಾಯಿಸಿದ್ದರಂತೆ. ಇದರಿಂದ ಬೇಸತ್ತಿದ್ದ ರೈತ ವಿಶುಕುಮಾರ್ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು.
ನೇರವಾಗಿ ವಿಧಾನಸೌಧದ ಬಳಿ ಬಂದು ಅಲ್ಲಿದ್ದ ಶ್ರೀಗಂಧದ ಮರಗಳನ್ನು ಕಡಿದು ಹಾಕಿದ್ದಾರೆ. ಈ ವೇಳೆ ಮಾತನಾಡಿದ ವಿಶುಕುಮಾರ್, ನನ್ನ ಮಕ್ಕಳ ಹುಟ್ಟುಹಬ್ಬದ ನೆನಪಿಗಾಗಿ ನಾನು ಮರಗಳನ್ನು ನೆಟ್ಟಿದ್ದೆ. ಆದರೆ ಮರ ಹೆದ್ದಾರಿ ಪಕ್ಕ ಇದೆ. ಅಭಿವೃದ್ಧಿ ಕಾಮಗಾರಿ ಎಂದು ಹೇಳಿ ಅಧಿಕಾರಿಗಳು ಮರಗಳನ್ನು ಕಡಿದು ಹಾಕಿದ್ದಾರೆ. ಪರಿಹಾರವನ್ನೂ ಕೊಟ್ಟಿಲ್ಲ. ಕೋರ್ಟ್ ಮೆಟ್ಟಿಲೇರಿದ್ದೆ. ಕೋರ್ಟ್ ಪರಿಹಾರದ ಹಣ ನೀಡುವಂತೆ ಆದೇಶ ನೀಡಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಪರಿಹಾರ ನೀಡಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಧಿಕಾರಿಗಳು ನನ್ನ 30 ಮರಗಳನ್ನು ಕಡಿದಿದ್ದಾರೆ. ಪರಿಹಾರವನ್ನು ನೀಡಿಲ್ಲ. ಅದಕ್ಕೆ ನಾನು 300 ಮರಗಳನ್ನು ಕಡಿಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರೈತನನ್ನು ಸಮಾಧಾನಪಡಿಸಿ ಕರೆದೊಯ್ದಿದ್ದಾರೆ.

