ಬೆಂಗಳೂರು: ರಾಜ್ಯದ ರೈತರು ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಭೀಕರ ಬರಗಾಲ ಎದುರಾಗಿದೆ. ಅನೇಕ ಜ್ವಲಂತ ಸಮಸ್ಯೆಗಳಿವೆ. ಹೀಗಿದ್ದರೂ ಸದನದಲ್ಲಿ ಚರ್ಚೆ ಮಾಡೋದಕ್ಕೆ ಅವಕಾಶಗಳು ಸಿಕ್ತಾ ಇಲ್ಲ. ಅದರಲ್ಲೂ ಈ ವರ್ಷ 150 ವರ್ಷಗಳ ಇತಿಹಾಸದಲ್ಲೇ ಕಂಡರಿಯದ ಬರಗಾಲ ಎದುರಾಗಿದೆ ಇವುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕಿದೆ ಎಂದರು.
ಸೂಪರ್ ಎಲ್ ನಿನೋ ಪರಿಣಾಮ ಬರಗಾಲದ ಸ್ಥಿತಿ ಎದುರಾಗಿದೆ. ಇದರ ಇಂಪ್ಯಾಕ್ಟ್ ರೈತನ ಜೀವನಕ್ಕೆ ಆಗೋದರ ಜೊತೆಗೆ ಇಡೀ ರಾಜ್ಯದ ಸಮುದಾಯಕ್ಕೆ ಆಗುತ್ತಿದೆ. ಎಕಾನಮಿ ಇರಬಹುದು, ಜನಗಳ ಆಹಾರ ಇರಬಹುದು, ಇವೆಲ್ಲದಕ್ಕೂ ಎಫೆಕ್ಟ್ ಆಗಿದೆ. ಇದರ ಬಗ್ಗೆ ಸುದೀರ್ಘ ಚರ್ಚೆ ಆಗಬೇಕೆಂದು ವಿಶೇಷ ಅಧಿವೇಶನ ಕರೆಯುತ್ತಿದ್ದೇವೆ. ಸೆಪ್ಟೆಂಬರ್ 21, 22 ಹಾಗೂ 23 ಈ ಮೂರು ದಿನ ವಿಶೇಷ ಅಧಿವೇಶನಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಕಸ್ತೂರಿ ರಂಗನ್ ವರದಿ ಈಗ ಮತ್ತೆ ಚರ್ಚೆಗೆ ಬಂದಿದೆ. ಈಗಾಗಲೇ ನಾಲ್ಕೈದು ಬಾರಿ ಇದನ್ನ ರಿಜೆಕ್ಟ್ ಮಾಡಿದ್ದೇವೆ. ಆದರೂ ಕೂಡ ಇನ್ನು ಅದರ ಬಗ್ಗೆ ಚರ್ಚೆಗಳು ಬರುತ್ತಿವೆ. ಹೀಗಾಗಿ ಈ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಹೆಸರು ಮುಂದೆ ಬದಲಾಗಬಹುದು. ಈ ಯೋಜನೆ ಮೂಲಕ NRI ಕಾರ್ಡ್ ವಿತರಣೆ ಮಾಡುವ ಜೊತೆಗೆ ಉದ್ಯೋಗ ಅವಕಾಶ ನೀಡಲು ಈ ಯೋಜನೆ ನೆರವು ನೀಡಲಿದೆ ಎಂದರು.
ಅಲ್ಲದೆ, ಈ ಇಲಾಖೆಯ ಜೊತೆಗೆ ಸ್ಟೇಟ್ ಫೆಸಿಲಿಟೇಷನ್ ಕೌನ್ಸಿಲ್ ಕೂಡ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಕೌನ್ಸಿಲ್ಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಉಪ ಮುಖ್ಯಮಂತ್ರಿಗಳು ಉಪಾಧ್ಯಕ್ಷರಾದರೆ, ಇಂಡಸ್ಟ್ರಿ , ಕೃಷಿ, ತೋಟಗಾರಿಕೆ, ಐಟಿ ಬಿಟಿ , ಅರ್ಬನ್ ಡೆವಲಪ್ಮೆಂಟ್, ಬೆಂಗಳೂರು ಡೆವಲಪ್ಮೆಂಟ್, ಹೈಯರ್ ಎಜುಕೇಶನ್, ಪವರ್, ಹೆಲ್ತ್, ಸ್ಪೋರ್ಟ್ಸ್ ಮತ್ತು ಮೆಡಿಕಲ್ ಎಜುಕೇಶನ್ ಮಂತ್ರಿಗಳೆಲ್ಲ ಸದಸ್ಯರುಗಳಾಗಿರುತ್ತಾರೆ. ಇದು ಸ್ಟೇಟ್ ಫೆಸಿಲಿಟೇಷನ್ ಕೌನ್ಸಿಲ್ ಆಗಿರಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಉದ್ಯಾನವನಗಳ(ಸಂರಕ್ಷಣೆ) ತಿದ್ದುಪಡಿ ವಿಧೇಯಕ ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬಿಎಂಇ ಡ್ರೈವ್ ಪ್ರೋಗ್ರಾಮ್ ಅಡಿ ಕೇಂದ್ರ ಸರ್ಕಾರ ಒಟ್ಟು 4500 ಎಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಿದೆ. 6 ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಟೆಂಡರ್ ನೀಡಲಾಗಿದ್ದು, ವಿವಿಧ ಮಾದರಿಯ ಬಸ್ಗಳು ರಾಜ್ಯಕ್ಕೆ ಬರಲಿವೆ. ಇನ್ನು ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ವಿವರಿಸಿದರು.

