ಕಣ್ಣು ಹಾಯಿಸಿದಲ್ಲೆಲ್ಲಾ ಕೆಸರಿನ ಹೊಳೆ, ಬಂಡೆಗಲ್ಲುಗಳ ಅಡಿಯಲ್ಲಿ ಸಿಲುಕಿರುವ ಅವಶೇಷಗಳು ಮತ್ತು ರೋದಿಸುತ್ತಿರುವ ಜನರ ಮುಖಗಳು…… ಪ್ರಕೃತಿಯ ರುದ್ರನರ್ತನಕ್ಕೆ ಅಕ್ಷರಶಃ ನಲುಗಿಹೋಗಿರುವ ನೆರೆಯ ನೇಪಾಳದ ಇಂದಿನ ಭೀಕರ ಚಿತ್ರಣವಿದು. ದೇಶದಲ್ಲಿ ಸಂಭವಿಸಿರುವ ಮಹಾ ಜಲಪ್ರಳಯದಲ್ಲಿ ಈವರೆಗೆ ಬರೋಬ್ಬರಿ 1,252 ಕ್ಕೂ ಹೆಚ್ಚು ಅಮಾಯಕರು ಜಲಸಮಾಧಿಯಾಗಿದ್ದು, 4,200ಕ್ಕೂ ಹೆಚ್ಚು ಮಂದಿ ಇನ್ನೂ ಪತ್ತೆಯಾಗಿಲ್ಲ.
ಆದರೆ, ಈ ಅಂಕಿ-ಅಂಶಗಳು ಕೇವಲ ಸಂಖ್ಯೆಗಳಲ್ಲ; ಆ ಅಂಕಿ-ಅಂಶಗಳ ಹಿಂದೆ ಕೊಚ್ಚಿಹೋದ ನೂರಾರು ಮುಗ್ಧ ಕನಸುಗಳಿವೆ, ಅಸಹಾಯಕ ಜೀವಗಳ ಕಣ್ಣೀರ ಕಥೆಗಳಿವೆ ಎಂಬುದಕ್ಕೆ ಕೆಸರಿನಲ್ಲಿ ಸಿಕ್ಕ ಒಂದು ಶಾಲಾ ಚೀಲವೇ ಸಾಕ್ಷಿಯಾಗಿದೆ.
ಎದೆಕಲಕುವ ಆ ಶಾಲಾ ಚೀಲ ಯಾರದ್ದು ?
ಪ್ರವಾಹದ ರಕ್ಷಣಾ ಕಾರ್ಯಾಚರಣೆಯ ವರದಿಗಾರಿಕೆಯ ವೇಳೆ ನೆಲದ ಮೇಲೆ ಕೆಸರು ಮೆತ್ತಿಕೊಂಡಿದ್ದ ಕೊಳಕು ಶಾಲಾ ಚೀಲವೊಂದು (School Bag) ಕಣ್ಣಿಗೆ ಬಿದ್ದಿದೆ. ಪರ್ವತಗಳ ಮೇಲಿಂದ ನೀರಿನ ರಕ್ಕಸ ಗೋಡೆ, ಮಣ್ಣು ಮತ್ತು ಹೆಬ್ಬಂಡೆಗಳು ಧರೆಗುರುಳಿ ಬರುತ್ತಿದ್ದಾಗ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಮುಗ್ಧ ಶಾಲಾ ಮಕ್ಕಳ ಚೀಲವದು.
ಆ ಬ್ಯಾಗ್ ತೆರೆದು ನೋಡಿದಾಗ, ಅದರಲ್ಲಿ ಕೆಸರಿನಿಂದ ಕೂಡಿದ ನೋಟ್‌ಬುಕ್‌ಗಳು ಸಿಕ್ಕಿವೆ. ಅದರ ಮೇಲೆ ‘ಶ್ರೀ ಬಾಗೇಶ್ವರಿ ಪ್ರೌಢಶಾಲೆ, 7ನೇ ತರಗತಿ, ರೋಲ್ ನಂಬರ್ 31 – ರೋಶನ್ ಮಿಜಾರ್’ ಎಂದು ಬರೆಯಲಾಗಿತ್ತು. ಶಿಕ್ಷಕಿ ಅಂದು ಪಾಠ ಮುಗಿಸಿದ ಜಾಗವನ್ನು ಗುರುತಿಸಲು ಪುಸ್ತಕದ ಎರಡು ಪುಟಗಳ ನಡುವೆ ಇರಿಸಲಾಗಿದ್ದ ಪ್ಲಾಸ್ಟಿಕ್ ಸ್ಕೇಲ್ ಹಾಗೆಯೇ ಇತ್ತು. ಜತೆಗೆ ಎರಡು ಪೆನ್ನುಗಳು ಮತ್ತು ಮಧ್ಯಾಹ್ನದ ಊಟದ ಬಿಡುವಿನಲ್ಲಿ ತಿನ್ನಬೇಕಾಗಿದ್ದ, ಆದರೆ ತಿನ್ನಲಾಗದೆ ಉಳಿದ ಲಂಚ್ ಬಾಕ್ಸ್ ಕೂಡ ಆ ಚೀಲದಲ್ಲಿತ್ತು!
ಆ ಬಾಲಕ ರೋಶನ್ ಪ್ರವಾಹದಿಂದ ತಪ್ಪಿಸಿಕೊಂಡು ಬದುಕುಳಿದಿದ್ದಾನೋ ಅಥವಾ ಸಾವಿನ ಸಂಖ್ಯೆಗಳ ಪಟ್ಟಿಗೆ ಸೇರಿಹೋಗಿದ್ದಾನೋ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಆತನ ಶಾಲಾ ಚೀಲ ಮಾತ್ರ ನೇಪಾಳ ಇಂದು ಎದುರಿಸುತ್ತಿರುವ ಅತಿದೊಡ್ಡ ಮಾನವೀಯ ದುರಂತಕ್ಕೆ ಸಾಕ್ಷಿಯಾಗಿ ನಿಂತಿದೆ.
1,300ರ ಗಡಿಯತ್ತ ಸಾವಿನ ಸಂಖ್ಯೆ: ಯಾವ ಜಿಲ್ಲೆಯಲ್ಲಿ ಎಷ್ಟು ಸಾವು ?
ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಬಿಡುಗಡೆ ಮಾಡಿರುವ ಜಿಲ್ಲಾವಾರು ವರದಿಯ ಪ್ರಕಾರ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ:
-
ಚಿತ್ವಾನ್: ಬರೋಬ್ಬರಿ 355 ಮೃತದೇಹಗಳು ಪತ್ತೆ (ಅತ್ಯಧಿಕ ಸಾವು)
-
ನವಲ್‌ಪರಾಸಿ ಪೂರ್ವ: 218 ಸಾವು
-
ನವಲ್‌ಪರಾಸಿ ಪಶ್ಚಿಮ: 208 ಸಾವು
-
ನುವಾಕೋಟ್: 177 ಸಾವು
-
ರಸುವಾ: 127 ಸಾವು
ಹೆಚ್ಚಿನ ಮೃತದೇಹಗಳು ಗುರುತೇ ಸಿಗದ ರೀತಿಯಲ್ಲಿ ಛಿದ್ರಗೊಂಡಿದ್ದು, ಈವರೆಗೆ ಕೇವಲ 95 ಮೃತದೇಹಗಳನ್ನು ಮಾತ್ರ ಅಧಿಕೃತವಾಗಿ ಗುರುತಿಸಲು ಸಾಧ್ಯವಾಗಿದೆ. ಸದ್ಯ 11,993 ಜನರನ್ನು ರಕ್ಷಿಸಲಾಗಿದ್ದು, 5,135 ಕ್ಕೂ ಹೆಚ್ಚು ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಲವಿದ್ಯುತ್ ಯೋಜನೆಗಳ 900 ಕಾರ್ಮಿಕರು, 583 ವಿದೇಶಿಗರು ನಾಪತ್ತೆ !
ನಾಪತ್ತೆಯಾಗಿರುವ 4,216 ಜನರ ಪೈಕಿ ಸುಮಾರು 900 ಮಂದಿ ವಿವಿಧ ಜಲವಿದ್ಯುತ್ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯಾಗಿದ್ದಾರೆ. ಇವರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ 583 ವಿದೇಶಿ ಪ್ರವಾಸಿಗರು ಮತ್ತು ಅವರಿಗೆ ಮಾರ್ಗದರ್ಶಕರಾಗಿದ್ದ 164 ನೇಪಾಳಿ ಪ್ರವಾಸಿ ಗೈಡ್‌ಗಳ ಸುಳಿವು ಇದುವರೆಗೂ ಪತ್ತೆಯಾಗಿಲ್ಲ.
ಟೆಲಿಕಾಂ ಟವರ್‌ಗಳು, ಸೇತುವೆಗಳು ಮತ್ತು ಪ್ರಮುಖ ಹೆದ್ದಾರಿಗಳು ಕೊಚ್ಚಿಹೋಗಿರುವುದರಿಂದ ಸಂವಹನ ಸಂಪೂರ್ಣವಾಗಿ ಕಡಿದುಹೋಗಿದ್ದು, ಸಂತ್ರಸ್ತರನ್ನು ಸಂಪರ್ಕಿಸುವುದು ರಕ್ಷಣಾ ತಂಡಗಳಿಗೆ ದುಸ್ತರವಾಗಿದೆ.
ನೇಪಾಳಕ್ಕೆ ಭಾರತದ ಆಸರೆ; ಜಾಗತಿಕ ಸಮುದಾಯದ ನೆರವು:
ಈ ಸಂಕಷ್ಟದ ಗಳಿಗೆಯಲ್ಲಿ ಭಾರತವು ತಕ್ಷಣವೇ ಸ್ಪಂದಿಸಿದ್ದು, ರಕ್ಷಣಾ ಸಿಬ್ಬಂದಿ, ಆಧುನಿಕ ಯಂತ್ರೋಪಕರಣಗಳು, ಅಗತ್ಯ ಆಹಾರ ಮತ್ತು ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸುವ ಮೂಲಕ ನೆರೆಯ ದೇಶಕ್ಕೆ ಆಸರೆಯಾಗಿ ನಿಂತಿದೆ. ಅಮೆರಿಕ ಕೂಡ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.
ಇದೇ ವೇಳೆ, ನೇಪಾಳ ಪ್ರಧಾನಿ ಬಾಲೇಂದ್ರ ಶಾ ಮತ್ತು ವಿದೇಶಾಂಗ ಸಚಿವ ಶಿಶಿರ್ ಖನಾಲ್ ಈ ಮಹಾ ವಿನಾಶಕ್ಕೆ ಹವಾಮಾನ ಬದಲಾವಣೆಯೇ (Climate Change) ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಇಂಗಾಲದ ಹೊರಸೂಸುವಿಕೆಗೆ ಕಿಂಚಿತ್ತೂ ಕೊಡುಗೆ ನೀಡದ ನೇಪಾಳದಂತಹ ಹಿಮಾಲಯನ್ ರಾಷ್ಟ್ರಗಳು ಜಾಗತಿಕ ಮಾಲಿನ್ಯಕ್ಕೆ ಇಂದು ಭಾರಿ ಬೆಲೆ ತೆರುತ್ತಿದ್ದು, ಮುಂದುವರಿದ ದೊಡ್ಡ ರಾಷ್ಟ್ರಗಳು ಬಾಧಿತ ದೇಶಗಳಿಗೆ ಪರಿಹಾರ ನೀಡುವ ಐತಿಹಾಸಿಕ ಜವಾಬ್ದಾರಿಯನ್ನು ಹೊರಬೇಕು ಎಂದು ಒತ್ತಾಯಿಸಿದ್ದಾರೆ.

