”ಹೋಮ್ ಅಲೋನ್’ ಖ್ಯಾತಿಯ ಹಿರಿಯ ಹಾಲಿವುಡ್ ನಟಿ ಕ್ಯಾಥರಿನ್ ಓ’ಹಾರಾ’ ನಿಧನರಾಗಿದ್ದಾರೆ.ನಟಿ ಕ್ಯಾಥರಿನ್ ಓ’ಹಾರಾ ಅವರು ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ. ಕ್ಯಾಥರಿನ್ ಅವರು ಪತಿ ಬೋ ವೆಲ್ಚ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ಅನೇಕ ಮರೆಯಲಾಗದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಹೋಮ್ ಅಲೋನ್’ ಚಿತ್ರದ ಕೇಟ್ ಮೆಕಾಲಿಸ್ಟರ್ ಪಾತ್ರದಿಂದ ಹಿಡಿದು ‘ಶಿಟ್ಸ್ ಕ್ರೀಕ್’ ಸರಣಿಯ ಮೊಯಿರಾ ರೋಸ್ವರೆಗೆ ಅವರು ಮನೆಮಾತಾಗಿದ್ದರು. ಇತ್ತೀಚಿನ ಬೀಟಲ್ಜ್ಯೂಸ್ (2024) ಸೀಕ್ವೆಲ್, ‘ದಿ ಲಾಸ್ಟ್ ಆಫ್ ಅಸ್’, ‘ದಿ ನೈಟ್ ಮೇರ್ ಬಿಫೋರ್ ಕ್ರಿಸ್ಮಸ್’ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟಿಸಿದ್ದರು. ‘ಶಿಟ್ಸ್ ಕ್ರೀಕ್’ ಸರಣಿಯ ಅದ್ಭುತ ನಟನೆಗಾಗಿ ಅವರು 2020ರಲ್ಲಿ ಎಮ್ಮಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು
ಬಾಲ್ಯ ಮತ್ತು ಆರಂಭಿಕ ದಿನಗಳು
ಮಾರ್ಚ್ 4, 1954 ರಂದು ಟೊರೊಂಟೊದಲ್ಲಿ ಜನಿಸಿದ ಕ್ಯಾಥರಿನ್, ಏಳು ಮಕ್ಕಳ ದೊಡ್ಡ ಐರಿಶ್ ಕ್ಯಾಥೋಲಿಕ್ ಕುಟುಂಬದಲ್ಲಿ ಬೆಳೆದರು. ಅವರ ಸಹೋದರ ಮಾರ್ಕಸ್ ಮೂಲಕ ಹಾಲೀವುಡ್ ಪರಿಚಯವಾಯಿತು. ಆರಂಭದಲ್ಲಿ ಟೊರೊಂಟೊದ ಥಿಯೇಟರ್ವೊಂದರಲ್ಲಿ ವೇಟ್ರೆಸ್ ಆಗಿ ಕೆಲಸ ಮಾಡುತ್ತಿದ್ದ ಅವರು, 1974ರಲ್ಲಿ ನಟನೆಯತ್ತ ವಾಲಿದರು. “ಇಂಪ್ರೂವ್ (Improv – ಸಿದ್ಧತೆಯಿಲ್ಲದ ನಟನೆ) ನನಗೆ ಸ್ವಾತಂತ್ರ್ಯ ನೀಡುತ್ತದೆ. ಪ್ರತಿ ವ್ಯಕ್ತಿ ಮತ್ತು ಪಾತ್ರವು ನಮಗೆ ಏನನ್ನಾದರೂ ಕಲಿಸುತ್ತದೆ” ಎಂದು ಅವರು ಇತ್ತೀಚೆಗಷ್ಟೇ ಹೇಳಿದ್ದರು.
ಜೀವನ ಬದಲಿಸಿದ ‘ಬೀಟಲ್ಜ್ಯೂಸ್’
1988ರ ಟಿಮ್ ಬರ್ಟನ್ ಅವರ ‘ಬೀಟಲ್ಜ್ಯೂಸ್’ ಚಿತ್ರದ ಡೆಲಿಯಾ ಡೀಟ್ಜ್ ಪಾತ್ರವು ಅವರ ವೃತ್ತಿಜೀವನದ ತಿರುವು ನೀಡಿತು. “ಯಾವುದೇ ಸಿನಿಮಾ ಹೇಗೆ ಸ್ವೀಕರಿಸಲ್ಪಡುತ್ತದೆ ಎಂಬುದು ನಮಗೆ ತಿಳಿಯುವುದಿಲ್ಲ, ಅದೆಲ್ಲಾ ಅದೃಷ್ಟ ಮತ್ತು ಸಮಯದ ಆಟ” ಎಂದು ಅವರು ತಮ್ಮ ಸಂದರ್ಶನದಲ್ಲಿ ಸ್ಮರಿಸಿದ್ದರು.
ಬದುಕಿನ ಬಗ್ಗೆ ಧನಾತ್ಮಕ ಚಿಂತನೆ
ತಮ್ಮ 70ನೇ ವಯಸ್ಸಿನಲ್ಲಿ ಅವರು ವಯಸ್ಸಾಗುವ ಬಗ್ಗೆ ಸುಂದರವಾದ ಮಾತನ್ನು ಹಂಚಿಕೊಂಡಿದ್ದರು:
“ನಮಗೆ 70 ವರ್ಷವಾದಾಗ, ನಾವು ಕನಿಷ್ಠ ಇನ್ನೊಂದು 20 ವರ್ಷ ಬದುಕುತ್ತೇವೆ ಎಂದು ಕಲ್ಪಿಸಿಕೊಳ್ಳಬೇಕು. ಆಗ ನಮ್ಮ ಮುಂದೆ ಒಂದು ಸವಾಲಿರುತ್ತದೆ. ಜೀವನದಲ್ಲಿ ವೇಗ ಕಡಿಮೆ ಮಾಡುವ ಬದಲು, 90 ವರ್ಷದವರೆಗೆ ಬದುಕುತ್ತೇನೆ ಎಂದುಕೊಂಡು ಮುನ್ನಡೆಯಬೇಕು.”
ಸಿನಿಮಾ ಲೋಕದ ನಷ್ಟ: ಕ್ಯಾಥರಿನ್ ಓ’ಹಾರಾ ಅವರ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಿರಿಯ ನಟ ಯುಜೀನ್ ಲೆವಿ ಅವರೊಂದಿಗೆ ಅವರು ಹೊಂದಿದ್ದ ಸುದೀರ್ಘ ವೃತ್ತಿಪರ ಬಾಂಧವ್ಯವು ಹಾಲೀವುಡ್ನ ಯಶಸ್ವಿ ಜೋಡಿಗಳಲ್ಲಿ ಒಂದಾಗಿತ್ತು.
ಕ್ಯಾಥರಿನ್ ಓ’ಹಾರಾ ನಟಿಸಿದ್ದ ಪ್ರಸಿದ್ದ ಸಿನಿಮಾ, ಶೋಗಳು
•ಹೋಮ್ ಅಲೋನ್ (Home Alone – 1990): ಇದರಲ್ಲಿ ಅವರು ಕೆವಿನ್ ಮೆಕಾಲಿಸ್ಟರ್ ತಾಯಿಯಾಗಿ ನಟಿಸಿದ್ದರು. ವಿಮಾನ ನಿಲ್ದಾಣದಲ್ಲಿ ತನ್ನ ಮಗನನ್ನು ಮರೆತಿದ್ದನ್ನು ತಿಳಿದು ಅವರು ಚೀರುವ ದೃಶ್ಯ ಇಂದಿಗೂ ಸಾರ್ವಕಾಲಿಕ ಫೇವರೆಟ್.
- ಶಿಟ್ಸ್ ಕ್ರೀಕ್ (Schitt’s Creek – 2015-2020): ಇದರಲ್ಲಿನ ಅವರ ‘ಮೊಯಿರಾ ರೋಸ್’ ಪಾತ್ರವು ಅವರಿಗೆ 2020ರಲ್ಲಿ ಎಮ್ಮಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಶೋ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು.
- ಬೀಟಲ್ಜ್ಯೂಸ್ (Beetlejuice – 1988 & 2024): ಟಿಮ್ ಬರ್ಟನ್ ಅವರ ಈ ಫ್ಯಾಂಟಸಿ ಸಿನಿಮಾದಲ್ಲಿ ಡೆಲಿಯಾ ಡೀಟ್ಜ್ ಆಗಿ ಅವರ ನಟನೆ ಅದ್ಭುತವಾಗಿತ್ತು. ಇದರ ಸೀಕ್ವೆಲ್ 2024ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು.

