ಬೆಂಗಳೂರು: ರಾಜ್ಯದಲ್ಲಿ ವಾಹನಗಳ ನೋಂದಣಿ ಹೆಚ್ಚಿಸಲು ತೆರಿಗೆ ಪ್ರಮಾಣ ಇಳಿಕೆ ಮಾಡಿ ಜಾರಿಗೊಳಿಸಿದ ಕರ್ನಾಟಕ ಮೋಟಾರ್ ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧಯಕ ಮೇ 1ರಿಂದ ಅನುಷ್ಠಾನಗೊಳಿಸುವಂತೆ ಸಾರಿಗೆ ಇಲಾಖೆಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ತೆರಿಗೆ ಹೊರೆ ಕಾರಣದಿಂದ ನೋಂದಣಿಗಾಗಿ ಹೊರರಾಜ್ಯಗಳತ್ತ ವಾಹನಗಳು ಮುಖ ಮಾಡುತ್ತಿರುವುದನ್ನು ತಡೆಯಲು ರಾಜ್ಯದಲ್ಲಿ ವಾಹನ ನೋಂದಣಿ ಹೆಚ್ಚುವಂತೆ ಮಾಡಲು ಕಳೆದ ಅಧಿವೇಶನದಲ್ಲಿ ಕರ್ನಾಟಕ ಮೋಟಾರ್ ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ.
ಈ ತಿದ್ದುಪಡಿ ಅನ್ವಯ ರಾಜ್ಯದಲ್ಲಿ ನೋಂದಣಿಯಾಗುವ 12 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಒಪ್ಪಂದದ ವಾಹನ, ಸ್ಲೀಪರ್ ಕೋಚ್ ಬಸ್ ಗಳಿಗೆ ಪ್ರತಿ ಆಸನಗಳಿಗೆ ಈಗಿರುವ ತೆರಿಗೆ ಪ್ರಮಾಣವನ್ನು 1 ಸಾವಿರ ರೂಪಾಯಿ ಇಳಿಕೆ ಮಾಡಲಾಗಿದೆ. ಈ ವಾಹನಗಳಿಗೆ ಕ್ರಮವಾಗಿ 3500 ಮತ್ತು 4000 ರೂ. ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು 2500 ರೂ. ಮತ್ತು 3000 ರೂ.ಗೆ ಇಳಿಕೆಯಾಗಲಿದೆ. ಇದೇ ರೀತಿ ವಿವಿಧ ವಾಹನಗಳ ನೋಂದಣಿಗೂ ತೆರಿಗೆ ಕಡಿಮೆ ಮಾಡಲಾಗಿದ್ದು, ಮೇ 1ರಿಂದ ನಿಗದಿತ ವಾಹನಗಳ ನೋಂದಣಿ ತೆರಿಗೆ ಇಳಿಕೆಯಾಗಲಿದೆ.

