ಏಪ್ರಿಲ್ 9ರಂದು ನಡೆಯುವ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಹೆಚ್.ವೈ.ಮೇಟಿ ನಿಧನದ ಕಾರಣ ಉಪ ಚುನಾವಣೆ ಎದುರಾಗಿದ್ದು, ಮೇಟಿ ಕುಟುಂಬದಲ್ಲೇ ನಾಲ್ವರು ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ.
ಹೆಚ್.ವೈ. ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವುದು ಸೂಕ್ತ. ಆದರೆ ಹೈಕಮಾಂಡ ಮೇಟಿ ಕುಟುಂಬ ಬಿಟ್ಟು ಬೇರೆ ಅವರಿಗೆ ಟಿಕೆಟ್ ಕೊಡುವುದಾದರೆ ನಾನು ಕೂಡಾ ಪ್ರಬಲ ಆಕಾಂಕ್ಷಿ ಎಂದು ವೀಣಾ ವಿಜಯಾನಂದ ಕಾಶಪ್ಪನವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಬುಧವಾರ ಹೆಚ್.ವೈ.ಮೇಟಿ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ, ಪುತ್ರಿಯರಾದ ಬಾಯಕ್ಕ, ಮಹಾದೇವಿ ಅವರನ್ನು ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಸಿದ್ದರಾಮಯ್ಯ ಎಲ್ಲರ ಜೊತೆ ಉಪ ಚುನಾವಣೆ ಟಿಕೆಟ್ ಕುರಿತು ಮಾತುಕತೆ ನಡೆಸಲಿದ್ದು, ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಆದರೆ ಯಾರಿಗೆ ಟಿಕೆಟ್ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮಹಾದೇವಿ ಮೇಟಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಈಗಾಗಲೇ ಘೋಷಣೆ ಮಾಡಿದ್ದು, ಕಾಂಗ್ರೆಸ್ ನಾಯಕರ ತಲೆನೋವಿಗೆ ಕಾರಣವಾಗಿವೆ. ಆದ್ದರಿಂದ ಅಭ್ಯರ್ಥಿ ಆಯ್ಕೆಯ ವಿಚಾರವನ್ನು ಸಿದ್ದರಾಮಯ್ಯಗೆ ನೀಡಲಾಗಿದೆ.
ವೀಣಾ ಕಾಶಪ್ಪನವರ್: ವೀಣಾ ವಿಜಯಾನಂದ ಕಾಶಪ್ಪನವರ್ 2024ರ ಲೋಕಸಭ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಸಿದ್ದರು. ಆದರೆ ಅಂತಿಮವಾಗಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು, ಅವರು ಚುನಾವಣೆಯಲ್ಲಿ ಸೋತಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ವೀಣಾ ಕಾಶಪ್ಪನವರ್ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 496,451 ಮತಗಳನ್ನು ಪಡೆದು ಅವರು ಬಿಜೆಪಿಯ ಪಿಸಿ ಗದ್ದಿಗೌಡರ್ ವಿರುದ್ಧ ಸೋತಿದ್ದರು.
ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವ ವೀಣಾ ಕಾಶಪ್ಪನವರ್ ಈಗ ಹೆಚ್.ವೈ. ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವುದು ಸೂಕ್ತ. ಆದರೆ ಹೈಕಮಾಂಡ ಮೇಟಿ ಕುಟುಂಬ ಬಿಟ್ಟು ಬೇರೆ ಅವರಿಗೆ ಟಿಕೆಟ್ ಕೊಡುವುದಾದರೆ ನನಗೆ ಟಿಕೆಟ್ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.

