ಬೃಹತ್ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ವಿರುದ್ಧವೂ ಸಹ ಹಗೆತನ, ವಿರೋಧ ವ್ಯಕ್ತಪಡಿಸುವ ಸಣ್ಣ ಮನಸ್ಸಿನ ವ್ಯಕ್ತಿಗಳು ಅಸ್ವಿತ್ವದಲ್ಲಿದ್ದು, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಸಹ ಇದಕ್ಕೆ ಹೊರತಾಗಿಲ್ಲ. ಸಂವಿಧಾನ ಬರೆದು ಅದರಲ್ಲಿ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸಿ ಹಲವಾರು ಹಕ್ಕುಗಳನ್ನು ನೀಡಿ ಅಪಾರ ಕೊಡುಗೆ ನೀಡಿದ ಇವರ ಬಗ್ಗೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಪರ ಸಂವಿಧಾನ ಬರೆದಿದ್ದಾರೆ ಎಂಬ ತಪ್ಪು ಸುದ್ದಿ ಹಾಗೂ ಕಲ್ಪನೆ ಈ ಹಿಂದಿನಿಂದಲೂ ಹರಿದಾಡುತ್ತಲೇ ಇದೆ.
ಇದನ್ನು ನಂಬಿದವರು ಹಾಗೂ ಇದನ್ನೇ ಹರಡುವ ಹಲವರು ಈ ವ್ಯಕ್ತಿಯ ತೇಜೋವಧೆ ಮುಂದುವರಿಸಿದ್ದು, ದೇಶದ ವಿವಿಧೆಡೆ ಇವರ ವಿರುದ್ಧ ಕಿಡಿಕಾಡುವ ಕೆಲ ಜನರಿದ್ದಾರೆ ಹಾಗೂ ಅವರು ಮಿತಿ ಮೀರಿ ವರ್ತಿಸಿ ಅಂಬೇಡ್ಕರ್ ಪ್ರತಿಮೆಗೆ ಮಸಿ ಬಳಿದು, ಅದನ್ನು ವಿಕೃತಿಗೊಳಿಸಿ ಬಂಧನಕ್ಕೂ ಸಹ ಒಳಗಾಗಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೇದಮೂರ್ತಿ ಎಂಬಾತ ಅಂಬೇಡ್ಕರ್ ವಿರುದ್ಧ ವಿಡಿಯೊ ಹರಿಬಿಟ್ಟಿದ್ದು, ಎಸ್‌ಸಿ ಸಮುದಾಯಕ್ಕೆ ಹೆಚ್ಚಿನ ಸವಲತ್ತನ್ನು ಸಂವಿಧಾನದ ಮೂಲಕ ನೀಡಿದ್ದೀರ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾನೆ.
ವಿಡಿಯೊದಲ್ಲಿ ಏನಿದೆ?
ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದು, ಈತನ ವಿರುದ್ಧ ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈತನ ವಿಡಿಯೊದ ಸಣ್ಣ ಕ್ಲಿಪ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರಲ್ಲಿ ಈತ ‘ರೀ ಮಿಸ್ಟರ್ ಅಂಬೇಡ್ಕರ್ ಅವರೇ, ಸಂವಿಧಾನ ಬರಿಬೇಕಾದ್ರೆ ಎಣ್ಣೆ ಏನಾದ್ರೂ ಹೊಡೆದುಕೊಂಡು ಸಂವಿಧಾನ ಬರೆದಿದ್ರಾ? ರೀ ಶಿಕ್ಷಣದಲ್ಲಿ ಮೀಸಲಾತಿ ಕೊಡಿಸಿದ್ದೀರ ಒಳ್ಳೆಯದು, ಶಿಕ್ಷಣದಲ್ಲಿ ಸಮಾನತೆ ತರಬೇಕು ಎಂದು ಕಡಿಮೆ ಅಂಕ ತೆಗೆದರೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಸೀಟು ಸಿಗುವಂತೆ ಮಾಡಿದ್ದೀರ ಒಳ್ಳೆಯದು, ಅವರಿಗೆ ಕಡಿಮೆ ಶುಲ್ಕ ಕಟ್ಟುವಂತೆ ಮಾಡಿದ್ದೀರ ಒಳ್ಳೆಯದು, ಸಂಘ ರಿಜಿಸ್ಟರ್ ಮಾಡಿಕೊಂಡ್ರೆ ಅಲ್ಲೂ ಕಡಿಮೆ ಹಣ ಒಳ್ಳೆಯದು, ಪೆಟ್ರೋಲ್ ಪಂಪ್ ಆರಂಭಿಸಿದರೆ ಅಲ್ಲೂ ಸಬ್ಸಿಡಿ ಒಳ್ಳೆಯದು. ಇಷ್ಟೆಲ್ಲ ಮೀಸಲಾತಿ ಇದ್ದ ಮೇಲೂ ಪರೀಕ್ಷೆ ಬರೆದು ಪಡೆದುಕೊಳ್ಳುವ ಸರ್ಕಾರಿ ಕೆಲಸದ ಮೇಲೂ ಯಾಕಪ್ಪ ಮೀಸಲಾತಿ?’ ಎಂದು ಪ್ರಶ್ನಿಸಿದ್ದಾನೆ.

