ಮನೆಯ ಅಂದವನ್ನು ಹೆಚ್ಚಿಸಲು ಜನರು ವಿಭಿನ್ನ ರೀತಿಯ ಅಲಂಕಾರಿಕ ವಸ್ತುಗಳನ್ನು ಬಳಸುತ್ತಾರೆ. ಅವುಗಳಲ್ಲಿ ಆನೆಯ ಪ್ರತಿಮೆ ಅಥವಾ ಬೊಂಬೆಗಳನ್ನು ಇಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಆನೆಯ ಪ್ರತಿಮೆಯನ್ನು ಇಡುವುದು ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಆನೆಯು ಶಕ್ತಿ, ಸಮೃದ್ಧಿ, ಬುದ್ಧಿವಂತಿಕೆ ಮತ್ತು ಧೈರ್ಯದ ಸಂಕೇತವಾಗಿದೆ. ಹಾಗಾಗಿ, ಮನೆಯಲ್ಲಿ ಆನೆಯ ಆಕೃತಿಯನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಹಲವು ರೀತಿಯ ಪ್ರಯೋಜನಗಳು ಸಿಗುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ ಸಿಗುವ ಪ್ರಮುಖ ಲಾಭಗಳು:
ಆನೆಯನ್ನು ಗಣೇಶನ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಮನೆಯ ಮುಖ್ಯ ದ್ವಾರದ ಬಳಿ ಸೊಂಡಿಲನ್ನು ಮೇಲಕ್ಕೆ ಎತ್ತಿರುವ ಎರಡು ಆನೆಗಳ ಪ್ರತಿಮೆಯನ್ನು ಇಡುವುದರಿಂದ ಮನೆಗೆ ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ. ಇದು ನೆಗೆಟಿವ್ ಎನರ್ಜಿಯನ್ನು ದೂರವಿಡಲು ಸಹಕಾರಿಯಾಗಿದೆ. ಉತ್ತರ ದಿಕ್ಕು ಕುಬೇರನಿಗೆ ಸೇರಿದ್ದಾಗಿದ್ದು, ಈ ದಿಕ್ಕಿನಲ್ಲಿ ಆನೆಯ ಪ್ರತಿಮೆಯನ್ನು ಇಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ವ್ಯಾಪಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಂಡುಬರುತ್ತದೆ.
ಕುಟುಂಬದಲ್ಲಿ ನೆಮ್ಮದಿ ಮತ್ತು ಮಕ್ಕಳ ಯಶಸ್ಸಿಗೆ ಪೂರಕ:
ಲಿವಿಂಗ್ ರೂಮ್ ಅಥವಾ ಮಲಗುವ ಕೋಣೆಯಲ್ಲಿ ಆನೆಗಳ ಜೋಡಿಯ ಪ್ರತಿಮೆಯನ್ನು ಇಡುವುದರಿಂದ ಪತಿ ಮತ್ತು ಪತ್ನಿಯ ನಡುವಿನ ಸಂಬಂಧ ಮಧುರವಾಗುತ್ತದೆ ಹಾಗೂ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಇನ್ನು ಮಕ್ಕಳ ಅಧ್ಯಯನ ಕೊಠಡಿಯಲ್ಲಿ ಆನೆಯ ಬೊಂಬೆಯನ್ನು ಇಡುವುದರಿಂದ ಅವರ ಏಕಾಗ್ರತೆ ಹೆಚ್ಚುತ್ತದೆ ಮತ್ತು ಬುದ್ಧಿಶಕ್ತಿ ತೀಕ್ಷ್ಣವಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಆನೆಯ ಪ್ರತಿಮೆಯನ್ನು ಇಡುವಾಗ ಅದು ಮುರಿದಿರಬಾರದು ಮತ್ತು ಯಾವಾಗಲೂ ಸ್ವಚ್ಛವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕು.

