ಬೆಂಗಳೂರು: ವಂದೇ ಮಾತರಂ ಗೀತೆಯ ಎರಡು ಚರಣಗಳನ್ನಷ್ಟೇ ಹಾಡಬೇಕೆಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಬಗ್ಗೆ ಪುನರ್ ಪರಿಶೀಲಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.
ಈ ಸಂಬಂಧ ರಾಜ್ಯಪಾಲರು ನಾಲ್ಕು ಪುಟಗಳ ಸುದೀರ್ಘ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮತ್ತು ರಾಜ್ಯಪಾಲರು ಪಾಲ್ಗೊಳ್ಳುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದ ರಾಜ್ಯ ಸರ್ಕಾರದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನಷ್ಟೇ ಹಾಡಬೇಕೆಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಬಗ್ಗೆ ಪುನರ್ ಪರಿಶೀಲಿಸುವಂತೆ ರಾಜ್ಯಪಾಲರು ತಿಳಿಸಿದ್ದಾರೆ.
ವಂದೇ ಮಾತರಂ ಹಾಡುವ ವಿಚಾರವಾಗಿ ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದು ಸೂಕ್ತ ಎನ್ನುವ ಸಲಹೆ ನೀಡಬಯಸುವುದಾಗಿ ರಾಜ್ಯಪಾಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂತಹ ಮರುಪರಿಶೀಲನೆ ರಾಜ್ಯ ಸರ್ಕಾರದ ಆಡಳಿತಾತ್ಮಕ ನಿರ್ದೇಶನಗಳು ಹಾಗೂ ಕೇಂದ್ರ ಸರ್ಕಾರ ಗೊತ್ತುಪಡಿಸಿದ ಶಿಷ್ಟಾಚಾರ ವಿಚಾರದ ನಡುವೆ ಅನಗತ್ಯ ಸಂಘರ್ಷ ಸೃಷ್ಟಿಯಾಗುವುದನ್ನು ತಪ್ಪಿಸುತ್ತವೆ. ಕೇಂದ್ರ ಮತ್ತು ರಾಜ್ಯಗಳ ಕಾರ್ಯಕಾರಿ ಅಧಿಕಾರಗಳ ವಿಚಾರವಾಗಿ ಸಾಂವಿಧಾನಿಕ ವಿವಾದಗಳನ್ನು ತಪ್ಪಿಸುವಲ್ಲಿಯೂ ಸಹಕಾರಿಯಾಗುತ್ತವೆ. ಸಾಂವಿಧಾನಿಕ ಔಚಿತ್ಯ ರಾಷ್ಟ್ರೀಯ ಶಿಷ್ಟಾಚಾರಗಳ ಪಾಲನೆಯಲ್ಲಿ ಏಕರೂಪತೆ ಮತ್ತು ಭಾರತೀಯ ರಾಷ್ಟ್ರೀಯ ಗೀತೆಗೆ ಗೌರವ ನೀಡುವುದನ್ನು ಕಾಪಾಡುವ ನಿಟ್ಟಿನಲ್ಲಿ ಈ ವಿಚಾರವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸುವುದು ಸೂಕ್ತವೆಂದು ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ.
ವಂದೇ ಮಾತರಂ ಗೀತೆಯ ಎರಡು ಚರಣಗಳನ್ನಷ್ಟೇ ಹಾಡಬೇಕೆಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶವು ಕೇಂದ್ರದ ಮಾರ್ಗಸೂಚಿಗಳು ಮತ್ತು ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ(ತಿದ್ದುಪಡಿ) ಕಾಯ್ದೆಗೆ ವ್ಯತಿರಿಕ್ತವಾಗಿದೆ. ವಂದೇ ಮಾತರಂ ಗೀತೆ ವಿಚಾರವು ರಾಷ್ಟ್ರೀಯ ಶಿಷ್ಟಾಚಾರದ ಭಾಗವಾದ್ದರಿಂದ ರಾಜ್ಯಗಳು ಪಾಲಿಸಬೇಕಿದೆ. ಕೇಂದ್ರದ ನಿರ್ದೇಶನಗಳು ರಾಜ್ಯ ಸರ್ಕಾರವು ಪ್ರತ್ಯೇಕ ಇಲ್ಲವೇ ಸಂಕ್ಷಿಪ್ತ ಅಥವಾ ಆಯ್ದ ಆವೃತ್ತಿಗಷ್ಟೇ ಹಾಡಲು ಅವಕಾಶ ಇಲ್ಲ. ಸಾಂವಿಧಾನದ ವಿಧಿ 162 ರ ಅನ್ವಯ ರಾಜ್ಯದ ಶಾಸಕಾಂಗವು ಶಾಸನ ರೂಪಿಸಲು ಅವಕಾಶ ನೀಡಿದರೂ ರಾಷ್ಟ್ರೀಯ ಶಿಷ್ಟಾಚಾರಕ್ಕೆ ವ್ಯತಿರಿಕ್ತವಾದ ಆದೇಶ ಹೊರಡಿಸುವಂತಿಲ್ಲ. ರಾಷ್ಟ್ರೀಯ ಗೀತೆ ಹಾಗೂ ಅದರ ಅಧಿಕೃತ ಗಾಯನ ಆವೃತ್ತಿ ವಿಚಾರ ರಾಜ್ಯಗಳ ವ್ಯಾಪ್ತಿಪಟ್ಟಿಗೆ ಬರುವ ವಿಚಾರವಲ್ಲ. ಸಂಸತ್ತು ರೂಪಿಸುವ ಕಾನೂನುಗಳನ್ನು ಪಾಲಿಸುವ ರೀತಿಯಲ್ಲಿ ರಾಜ್ಯದ ಕಾರ್ಯಾಂಗ ಅಧಿಕಾರ ಚಲಾಯಿಸಬೇಕು ಎಂದು ಹೇಳಲಾಗಿದೆ.
ವಂದೇ ಮಾತರಂ ಪೂರ್ಣ ಹಾಡುವುದು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ಆತ್ಮಸಾಕ್ಷಿಯ ಕಾರಣದಿಂದ ‘ವಂದೇ ಮಾತರಂ’ ಹಾಡಲು ನಿರಾಕರಿಸುವ ವ್ಯಕ್ತಿಗೆ ಶಿಕ್ಷೆ ವಿಧಿಸಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಈ ಸಂದರ್ಭದಲ್ಲಿ, 1986ರಲ್ಲಿ ರಾಷ್ಟ್ರೀಯ ಗೀತೆ ಹಾಡಲು ಆತ್ಮಸಾಕ್ಷಿಯ ಆಧಾರದ ಮೇಲೆ ನಿರಾಕರಿಸಿದ್ದ ಶಾಲಾ ಮಕ್ಕಳನ್ನು ರಕ್ಷಿಸಿದ ತನ್ನ ಹಿಂದಿನ ತೀರ್ಪನ್ನು ಪರಿಗಣಿಸುವಂತೆ ನ್ಯಾಯಾಲಯ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿತು. ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕಾನೂನನ್ನು ಕೃಷ್ಣ ಪ್ರಶ್ನಿಸಿದ್ದಾರೆ. ಕೊನೆಯ ನಾಲ್ಕು ಚರಣಗಳು ದೇಶದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗಿವೆ ಎಂಬ ವಾದವನ್ನು ಅವರು ಅರ್ಜಿಯಲ್ಲಿ ಮುಂದಿಟ್ಟಿದ್ದಾರೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಕೂಡ ಇದ್ದರು.
1986ರ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್
ಕೇಂದ್ರದ ಪ್ರತಿಕ್ರಿಯೆ ಕೇಳಿರುವ ನ್ಯಾಯಾಲಯ, 1986ರ ಬಿಜೋಯ್ ಎಮ್ಯಾನುಯೆಲ್ ವಿರುದ್ಧ ಕೇರಳ ರಾಜ್ಯ ಪ್ರಕರಣದಲ್ಲಿ ನೀಡಿದ್ದ ತೀರ್ಪಿನ ತತ್ವವೇ ತಿದ್ದುಪಡಿ ಕಾನೂನಿಗೂ ಅನ್ವಯಿಸಬೇಕು ಎಂದು ನಿರೀಕ್ಷಿಸುವುದಾಗಿ ತಿಳಿಸಿದೆ.
ಆ ಪ್ರಕರಣದಲ್ಲಿ, ಆತ್ಮಸಾಕ್ಷಿಯ ಕಾರಣದಿಂದ ರಾಷ್ಟ್ರಗೀತೆ ಹಾಡಲು ಗೌರವಪೂರ್ವಕವಾಗಿ ನಿರಾಕರಿಸಿದ್ದ ಶಾಲಾ ಮಕ್ಕಳಿಗೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿತ್ತು.
ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ, ರಾಷ್ಟ್ರೀಯ ಗೀತೆ ಅಥವಾ ರಾಷ್ಟ್ರೀಯ ಗೀತೆಯ ಸ್ಥಾನಮಾನವೇನು ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ವಿಚಾರವಲ್ಲ; ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಸರ್ಕಾರ ನಿರ್ಧರಿಸಬಹುದು ಎಂದು ಮೌಖಿಕವಾಗಿ ಹೇಳಿದರು.
ಆದರೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಂವಿಧಾನದ 25 ಮತ್ತು 26ನೇ ವಿಧಿಗಳ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಭಾವಿಸುವವರು ಅಥವಾ ಆತ್ಮಸಾಕ್ಷಿಯ ಆಧಾರದ ಮೇಲೆ ಹಾಡಲು ನಿರಾಕರಿಸುವವರನ್ನು ದಂಡಾತ್ಮಕ ಕ್ರಮಕ್ಕೆ ಒಳಪಡಿಸಬಾರದು ಎಂದು ಅವರು ಹೇಳಿದರು.

