ಗೋವಾ ಪ್ರವಾಸ ಹೋಗುವ ಜನರಿಗೆ ಭಾರತೀಯ ರೈಲ್ವೆ ಬಿಗ್ ಗಿಫ್ಟ್ ನೀಡಲಿದೆ. ಹೌದು ಬೆಂಗಳೂರು-ಗೋವಾ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ತಯಾರಿ ನಡೆಸಿದೆ, ಕರಡು ವೇಳಾಪಟ್ಟಿಯನ್ನು ಸಹ ತಯಾರು ಮಾಡಲಾಗಿದೆ. ಈ ರೈಲು ಮೂಲಕ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ಸಂಪರ್ಕ ಸುಧಾರಿಸಲಿದೆ.
ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಇಲಾಖೆ ತಯಾರಿ ನಡೆಸಿದೆ. ಈ ಕುರಿತು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲನೆ ನಡೆಸುತ್ತಿದ್ದಾರೆ. ಈ ಮಾರ್ಗದ ಪ್ರಯಾಣ 13 ಗಂಟೆಗಳು ಎಂದು ಅಂದಾಜಿಸಲಾಗಿದೆ.
ಬೆಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಂಗಳೂರು ಸೆಂಟ್ರೆಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳಿಗೆ ತಲುಪುವುದಿಲ್ಲ. ರೈಲು ಪಡೀಲ್ ಬೈಪಾಸ್ ಮೂಲಕ ಸಂಚಾರ ನಡೆಸುವಂತೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ವೇಳಾಪಟ್ಟಿ: ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ನಡುವೆ ರೈಲು ಸಂಚಾರ ತಪ್ಪಿಸಿದರೆ ರೈಲಿನ ವೇಗವನ್ನು ಹೆಚ್ಚಿಸಬಹುದು ಎಂದು ನೈಋತ್ಯ ರೈಲ್ವೆ ಮಂಡಳಿಗೆ ಸಲ್ಲಿಕೆ ಮಾಡಿದ ಟಿಪ್ಪಣಿಯಲ್ಲಿ ಪ್ರಸ್ತಾಪಿಸಿದೆ.
ಯಶವಂತಪುರ-ಮಡಗಾಂವ್, ಮಡಗಾಂವ್-ಯಶವಂತಪುರ ನಡುವೆ ರೈಲು ಸಂಚಾರವನ್ನು ನಡೆಸಲಿದೆ. ಎರಡೂ ಕಡೆಯಿಂದ ರೈಲು ಮುಂಜಾನೆ ಹೊರಟು ಸಂಜೆ ತಲುಪುವಂತೆ ವೇಳಾಪಟ್ಟಿ ತಯಾರು ಮಾಡಲಾಗುತ್ತಿದೆ.
ಕರಡು ವೇಳಾಪಟ್ಟಿ ಪ್ರಕಾರ ಯಶವಂತಪುರ-ಮಡಗಾಂವ್ ವಂದೇ ಭಾರತ್ ರೈಲು ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡಲಿದೆ. ಪಡೀಲ್ಗೆ 2 ಗಂಟೆ, ಮಡಗಾಂವ್ಗೆ ಸಂಜೆ 7 ಗಂಟೆಗೆ ತಲುಪಲಿದೆ.
ಮಡಗಾಂವ್-ಯಶವಂತಪುರ ನಡುವಿನ ರೈಲು ಮಡಗಾಂವ್ನಿಂದ ಬೆಳಗ್ಗೆ 5.30ಕ್ಕೆ ಹೊರಡಲಿದೆ. ಪಡೀಲ್ಗೆ 11 ಗಂಟೆಗೆ ಆಗಮಿಸಲಿದ್ದು, ಯಶವಂತಪುರಕ್ಕೆ ಸಂಜೆ 6.40ಕ್ಕೆ ತಲುಪಲಿದೆ. ಈ ಮಾರ್ಗದ ರೈಲು ಪ್ರಯಾಣದ ಅವಧಿ 13.10 ಗಂಟೆಗಳು ಎಂದು ಅಂದಾಜಿಸಲಾಗಿದೆ.
ಆದರೆ ರೈಲ್ವೆ ಸಚಿವಾಲಯ ಈ ರೈಲಿನ ಸರಾಸರಿ ವೇಗ ಗಂಟೆಗೆ 50 ಕಿ.ಮೀ. ಗಿಂತ ಕಡಿಮೆ ಇದೆ ಎಂದು ಹೇಳಿದೆ. ಆದರೆ ನೈಋತ್ಯ ರೈಲ್ವೆ ಚಿಕ್ಕಬಾಣಾವರ ಮತ್ತು ಹಾಸನ ನಡುವಿನ ವೇಗದ ಮಿತಿಯನ್ನು ಗಂಟೆಗೆ 110 ಕಿ.ಮೀ. ನಿಂದ 130 ಕಿ.ಮೀ.ಗೆ ಹೆಚ್ಚಿಸುವುದು.
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ವೇಗವನ್ನು ಗಂಟೆಗೆ 30 ಕಿ.ಮೀ. ನಿಂದ 40 ಕಿ.ಮೀ. ಗೆ ಹೆಚ್ಚಿಸುವ ಮೂಲಕ ರೈಲು ವೇಗ ಹೆಚ್ಚಿಸಬಹುದು ಎಂದು ಮಂಡಳಿಗೆ ವಿವರಣೆ ನೀಡಿದೆ.
ಈ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕ ವೇಳಾಪಟ್ಟಿ ಅಂತಿಮಗೊಳಿಸಲು ಇಲಾಖೆ ಮುಂದಾಗಿದೆ. ಆದರೆ ಸಕಲೇಶಪುರ-ಸುಬ್ರಮಣ್ಯ ರೋಡ್ ಮಾರ್ಗದಲ್ಲಿನ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಿ, ಪ್ರಮಾಣ ಪತ್ರ ನೀಡಿಲ್ಲ. ಈ ಪ್ರಮಾಣ ಪತ್ರ ನೀಡಿದರೆ ಬಳಿಕ ರೈಲು ಸೇವೆ ಆರಂಭಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಈ ರೈಲಿಗೆ ಯಶವಂತಪುರ-ಹಾಸನ-ಯಶವಂತಪುರ ವಿಭಾಗ (174 ಕಿ.ಮೀ.) ಸಂಚಾರಕ್ಕಾಗಿ ನೈಋತ್ಯ ರೈಲ್ವೆಯು ಸುಮಾರು ಮೂರು ಗಂಟೆಗಳ ಕಾಲಾವಕಾಶವನ್ನು (2.55 ಗಂಟೆಗಳು) ನಿಗದಿಪಡಿಸಿದೆ.
ಆದರೆ, ಇದೇ ದೂರವನ್ನು ಕ್ರಮಿಸಲು ಕೆ.ಎಸ್.ಆರ್ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ (16511/12) 2.45 ರಿಂದ 3 ಗಂಟೆಗಳು ಮತ್ತು ಕೆ.ಎಸ್.ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ (16595/96) ಕೇವಲ 2.30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

