ಬೆಂಗಳೂರು: ಐಪಿಎಲ್ನಲ್ಲಿ ಸದ್ಯ ಹದಿಹರೆಯದ ಯುವ ಆಟಗಾರನೊಬ್ಬನ ಜಬರ್ದಸ್ತ್ ಆಟ ಇಡೀ ವಿಶ್ವ ಕ್ರಿಕೆಟ್ ಜಗತ್ತನ್ನೇ ಉಬ್ಬೇರಿಸುವಂತೆ ಮಾಡಿದೆ! ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ಹಾಗೂ ಗುಜರಾತ್ (RR vs GT) ನಡುವಿನ ಹೈವೋಲ್ಟೇಜ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ತಂಡ ಸೋತಿರಬಹುದು. ಆದರೆ, ತಂಡದ ಪರ ಏಕಾಂಗಿ ಹೋರಾಟ ನೀಡಿದ 15 ವರ್ಷದ ಪೋರ ವೈಭವ್ ಸೂರ್ಯವಂಶಿ (Vaibhav Sooryavanshi) ಆಡಿದ ಸ್ಫೋಟಕ ಆಟಕ್ಕೆ ಇಡೀ ಕ್ರಿಕೆಟ್ ಲೋಕವೇ ತಲೆಬಾಗಿದೆ.
ಪಂದ್ಯದ ಬಳಿಕ ಡಗೌಟ್ನಲ್ಲಿ ಕುಳಿತು ಕಣ್ಣೀರು ಹಾಕಿದ ಈ ಪುಟ್ಟ ಹುಡುಗನ ವಿಡಿಯೋ ನೋಡಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಾಲುಗಳು ಈಗ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿವೆ
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನದ ಪ್ರಮುಖ ಬ್ಯಾಟರ್ಗಳು ಧೂಳೀಪಟವಾಗುತ್ತಿದ್ದಾಗ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್, ಗುಜರಾತ್ ಬೌಲರ್ಗಳ ಬೆವರಿಳಿಸಿದರು.
ಸ್ಫೋಟಕ ಇನ್ನಿಂಗ್ಸ್: ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ ಬರೋಬ್ಬರಿ 96 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಶತಕದ ಸನಿಹದಲ್ಲಿ ಆಘಾತ: ನೋಡ ನೋಡುತ್ತಿದ್ದಂತೆಯೇ ಅರ್ಧಶತಕ ಪೂರೈಸಿ ಶತಕದ ಸನಿಹಕ್ಕೆ ಬಂದ ವೈಭವ್, ದುರದೃಷ್ಟವಶಾತ್ ಮತ್ತೊಮ್ಮೆ ‘ನರ್ವಸ್ 90’ಗೆ ಬಲಿಯಾಗಿ ಕೇವಲ 4 ರನ್ಗಳಿಂದ ಶತಕ ವಂಚಿತರಾಗಿ ಪೆವಿಲಿಯನ್ಗೆ ಮರಳಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 214 ರನ್ ಕಲೆಹಾಕಲು ವೈಭವ್ ಅವರ ಈ ಆಟವೇ ಮುಖ್ಯ ಕಾರಣವಾಗಿತ್ತು. ಆದರೆ ರಾಜಸ್ಥಾನದ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ನಿಂದಾಗಿ ಗುಜರಾತ್ 18.4 ಓವರ್ಗಳಲ್ಲಿ 7 ವಿಕೆಟ್ಗಳಿಂದ ಗೆದ್ದು, ಮೂರನೇ ಬಾರಿಗೆ ಐಪಿಎಲ್ ಫೈನಲ್ಗೆ ಅರ್ಹತೆ ಪಡೆಯಿತು. ಈ ಸೋಲಿನಿಂದ ಬೇಸರಗೊಂಡು ವೈಭವ್ ಮೈದಾನದಲ್ಲೇ ಕಣ್ಣೀರು ಹಾಕಿದ್ದರು.
“ನಿನ್ನ ವಯಸ್ಸಲ್ಲಿ ನಮಗೆ ಗೋಲಿ ಆಡಲು ಬರ್ತಿರಲಿಲ್ಲ” – ಬಿಗ್ ಬಿ ಶ್ಲಾಘನೆ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೈಭವ್ ಅವರ ಕಣ್ಣೀರಿನ ವಿಡಿಯೋ ನೋಡಿ ಮನ ಕರಗಿದ ಬಾಲಿವುಡ್ ಮಹಾನಾಯಕ ಅಮಿತಾಬ್ ಬಚ್ಚನ್, ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಯುವ ಆಟಗಾರನನ್ನು ಹುರಿದುಂಬಿಸಿ ಪೋಸ್ಟ್ ಹಾಕಿದ್ದಾರೆ.
“15ನೇ ವಯಸ್ಸಿನಲ್ಲಿ ನಿನ್ನ ಈ ಆಟ ನಿಜಕ್ಕೂ ಸ್ಮರಣೀಯವಾದದ್ದು ಸೂರ್ಯ (ವೈಭವ್ ಸೂರ್ಯವಂಶಿ). ನಿನ್ನ ಈ ಚಿಕ್ಕ ವಯಸ್ಸಿನಲ್ಲಿ ನಮಗೆ ಸರಿಯಾಗಿ ಗೋಲಿ ಹಾಗೂ ಗಲ್ಲಿ ಕ್ರಿಕೆಟ್ ಆಡಲು ಕೂಡ ಬರುತ್ತಿರಲಿಲ್ಲ!” ಎಂದು ಬಿಗ್ ಬಿ ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕ್ರಿಕೆಟ್ ದಿಗ್ಗಜರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳವರೆಗೆ ಪ್ರತಿಯೊಬ್ಬರೂ ಈ 15 ವರ್ಷದ ಯುವ ಪ್ರತಿಭೆಯ ಬೆಂಬಲಕ್ಕೆ ನಿಂತಿದ್ದಾರೆ. “ಸೋಲಿಗೆ ಬೇಸರಪಡಬೇಡ, ನೀನು ಭಾರತೀಯ ಕ್ರಿಕೆಟ್ನ ಮುಂದಿನ ಭವಿಷ್ಯ” ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ.

