ಬೆಂಗಳೂರು: ಉಮರ್ ಖಾಲಿದ್ ವಿಚಾರವಾಗಿ ಕೆಪಿಸುಇಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯವರು ಹರಿಪ್ರಸಾದ್ ಅವರನ್ನು ಹುಚ್ಚ ಎಂದು ಹೇಳಿದ್ದರು,
ಜನಾರ್ಧನ ರೆಡ್ಡಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿ. ಕೆ. ಹರಿಪ್ರಸಾದ್ ಅವರು, “ನಾವು ಹುಚ್ಚರಿಗೆಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ ಜನಾರ್ದನ ರೆಡ್ಡಿಯವರ ದೇಶಭಕ್ತಿಯನ್ನು ಪ್ರಶ್ನಿಸಿ ಖಾರವಾಗಿ ಮಾತನಾಡಿದ್ದಾರೆ.
ಜನಾರ್ದನ ರೆಡ್ಡಿಗೆ ವಂದೇ ಮಾತರಂ 2 ಪ್ಯಾರಾನಾದ್ರೂ ಹಾಡೋಕೆ ಬರುತ್ತಾ ಕೇಳಿ ಎಂದು ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್, ಹುಚ್ಚರಿಗೆಲ್ಲ ನಾನು ಉತ್ತರ ಕೊಡಲ್ಲ. ವಂದೇ ಮಾತರಂ ಅವರಿಗೆ ಎರಡು ಪ್ಯಾರಾ ಆದ್ರೂ ಹೇಳೋಕೆ ಬರುತ್ತಾ ಕೇಳಿ. ಗಣಿ ಕಳ್ಳ ಸರ್ಕಾರದ ಗಣಿ ಲೂಟಿ ಮಾಡಿ ಜೈಲಲ್ಲಿ ಇದ್ದವನಲ್ಲ ನಾನು. ರಾಜಕೀಯ ಹೋರಾಟ ಮಾಡಿಕೊಂಡು ಬಂದಿರುವವನು. ಇವರಿಗೆಲ್ಲ ಉತ್ತರ ಕೊಡಲು ಹೋಗಲ್ಲ ಎಂದರು.
ಇವರು ಅಷ್ಟು ದೇಶಭಕ್ತಿ ದೇಶಪ್ರೇಮಿಗಳಾದರೆ ಖಾಕಿ ಚಡ್ಡಿ ಕರಿ ಟೋಪಿ ಹಾಕಿಕೊಂಡು ಶಾಖೆಯಲ್ಲಿ ರಾಷ್ಟ್ರಗೀತೆ ಹೇಳುವುದಕ್ಕೆ ಹೇಳಿ. ಇವರಿಗೆಲ್ಲ ಉತ್ತರ ಕೊಟ್ರೆ ನಾವೂ ಹುಚ್ಚರಾಗ್ತೀವಿ ಅಂತ ರೆಡ್ಡಿ ವಿರುದ್ಧ ಕಿಡಿಕಾರಿದರು.
ಅಲ್ಲದೇ ಸರ್ಕಾರ- ಪಕ್ಷದ ನಡುವೆ ಸಮನ್ವಯಕ್ಕಾಗಿ ಪೊಲಿಟಿಕಲ್ ಅಫೇರ್ಸ್ ಕಮಿಟಿ ಶೀಘ್ರವೇ ಮಾಡೋದಾಗಿ ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಪೊಲಿಟಿಕಲ್ ಅಫೇರ್ಸ್ ಕಮಿಟಿ ಎಲ್ಲಾ ರಾಜ್ಯದಲ್ಲೂ ಇದೆ. ಕರ್ನಾಟಕ ರಾಜ್ಯದಲ್ಲೂ ಸಹ ಸದ್ಯದಲ್ಲೇ ಮಾಡ್ತೀವಿ. ಮೊನ್ನೆ ಬಂದಿದ್ದ ಕೆ.ಸಿ ವೇಣುಗೋಪಾಲ್, ಸುರ್ಜೇವಾಲಾ ಆದಷ್ಟು ಬೇಗ ಪೊಲಿಟಿಕಲ್ ಅಫೇರ್ಸ್ ಕಮಿಟಿ ಮಾಡಬೇಕು ಅಂತ ನಿರ್ದೇಶನ ಕೊಟ್ಟಿದ್ದಾರೆ. ಆ ತಯಾರಿಯಲ್ಲಿ ನಾವು ಇದ್ದೇವೆ. ನಾನು ಈಗಾಗಲೇ ಎಲ್ಲಾ ನಾಯಕರಲ್ಲಿ ಸಲಹೆ ಸೂಚನೆ ಕೇಳಿದ್ದೇನೆ. ಆ ತೀರ್ಮಾನ ತೆಗೆದುಕೊಂಡು ಆದಷ್ಟು ಬೇಗ ಪೊಲಿಟಿಕಲ್ ಅಫೇರ್ಸ್ ಕಮಿಟಿ ಮಾಡುತ್ತೇವೆ ಎಂದು ತಿಳಿಸಿದರು.

