ಕಾರವಾರ: ರಾಜ್ಯದಲ್ಲಿ ಸಾಲು ಸಾಲು ಬ್ಯಾಂಕ್ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿರುವಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಳ್ಳರು ಬ್ಯಾಂಕ್ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ.
ಸುಂಕಸಾಳದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ದರೋಡೆಕೋರರು ಶೌಚಾಲಯದ ಗೋಡೆ ಕೊರೆದು ಬ್ಯಾಂಕ್ ದರೋಡೆಗೆ ಯತ್ನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ.
ಬ್ಯಾಂಕ್ ಹಿಂಭಾಗದ ಶೌಚಾಲಯದ ಗೋಡೆ ಕೊರೆದು ಖದೀಮರ ಗ್ಯಾಂಗ್ ಬ್ಯಾಂಕ್ ಗೆ ಎಂಟ್ರಿಕೊಟ್ಟಿದೆ. ಸ್ಟ್ರಾಂಗ್ ರೂಂ ನ ಗೋಡೆ ಒಡೆಯಲು ಯತ್ನಿಸಿದ್ದಾರೆ. ಆದರೆ ಗೋಡೆ ಒಡೆಯಲಾಗದೇ ಖಾಲಿ ಕೈಯಲ್ಲಿ ದರೋಡೆಕೋರರು ವಾಪಾಸ್ ಆಗಿದ್ದಾರೆ.
ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಎಸ್ ಪಿ ಎಂ.ಎನ್.ದೀಪನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

