HomeKarnatakaಮಾದಕ ವಸ್ತುಗಳ ವಿರುದ್ದ ಸಮರ ಸಾರಿದ ಉತ್ತರ ಕನ್ನಡ ಜಿಲ್ಲಾಡಳಿತ

ಮಾದಕ ವಸ್ತುಗಳ ವಿರುದ್ದ ಸಮರ ಸಾರಿದ ಉತ್ತರ ಕನ್ನಡ ಜಿಲ್ಲಾಡಳಿತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ, ಸೇವನೆ, ಸರಬರಾಜು ವಿರುದ್ಧ ತೀವ್ರ ಸಮರ ಸಾರಿರುವ ಜಿಲ್ಲಾಡಳಿತವು ಜಿಲ್ಲೆಯನ್ನು ಮಾದಕ ವಸ್ತು ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟನ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ವ್ಯಾಪಕ ತಪಾಸಣೆಗಳನ್ನು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಂತೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಜಿಲ್ಲೆಯಲ್ಲಿ 2023 ರಿಂದ ಇದುವರೆಗೆ ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದಂತೆ 106 ಪ್ರಕರಣಗಳಲ್ಲಿ 169 ಆರೋಪಿತರನ್ನು ಬಂಧಿಸಿದ್ದು, 75.534 ಕೆ.ಜಿ ಗಾಂಜಾ, 3.429 ಕೆ.ಜಿ. ಚರಸ್, 1.8 ಗ್ರಾಂ ಎಂಡಿಎಂಎ ನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ರೂ. 48,89,400 ಆಗಿದೆ.

ಮಾದಕ ವಸ್ತು ಸೇವನೆಯ 456 ಪ್ರಕರಣಗಳಲ್ಲಿ 577 ಜನರನ್ನು ಬಂಧಿಸಲಾಗಿದೆ. ಇದರಲ್ಲಿಯೂ 2025ರ ಜನವರಿಯಿಂದ 2026ರ ಫೆಬ್ರವರಿ ವರೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿತರನ್ನು ಬಂಧಿಸುವ ಮೂಲಕ, ಮಾದಕ ವಸ್ತು ಸೇವನೆ ಮತ್ತು ಸರಬರಾಜುದಾರರಿಗೆ ಕಠಿಣ ಸಂದೇಶ ರವಾನಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆ ಮತ್ತು ಸರಬರಾಜಿನಲ್ಲಿ ಕಂಡುಬಂದಿರುವ ಒಟ್ಟು 746 ಅಪರಾಧಿಗಳಲ್ಲಿ 18 ರಿಂದ 30 ವಯೋಮಾನದವರ ಸಂಖ್ಯೆ 593 ಆಗಿದ್ದು, 31 ರಿಂದ 40 ವಯೋಮಾನದವರ ಸಂಖ್ಯೆ 107 ಆಗಿದೆ. ಈ ಅಂಕಿ ಅಂಶಗಳ ಮೂಲಕ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವ ಸಮುದಾಯ ಈ ಮಾದಕ ವಸ್ತುಗಳ ಜಾಲದಲ್ಲಿ ಸಿಲುಕಿರುವುದು ಕಂಡುಬರುತ್ತಿದ್ದು, ಇದು ತೀರಾ ಕಳವಳಕಾರಿಯಾಗಿದೆ.

ಜಿಲ್ಲೆಯ ಯುವ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ಮಾದಕ ವಸ್ತುಗಳ ಸೇವನೆ ಮತ್ತು ಅದರ ದುಷ್ಪರಿಣಾಮಗಳ ಕುರಿತಂತೆ ಜಾಗೃತಿ ಮತ್ತು ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 2025 ಜನವರಿಯಿಂದ ಇದುವರೆಗೆ 1,515 ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 1,005 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, 49,653 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗಿದೆ.

527 ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ, 20,548 ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಗಿದೆ ಅಲ್ಲದೇ ಮಾದಕ ವಸ್ತು ಮುಕ್ತ ಕರ್ನಾಟಕ ಹೆಸರಿನಲ್ಲಿ ಆಯೋಜಿಸಿದ್ದ 5 ಕಿ.ಮೀ ಮತ್ತು 10 ಕಿ.ಮೀ ನ ಮ್ಯಾರಾಥಾನ್‌ನಲ್ಲಿ 1500 ಕ್ಕೂ ಅಧಿಕ ಮಂದಿ ಭಾಗವಹಿಸಿ ಮಾದಕ ವಸ್ತುಗಳ ವಿರುದ್ಧ ಸಾಮಾಜಿಕ ಸಂದೇಶ ಸಾರಿದ್ದಾರೆ.

ಅಲ್ಲದೇ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ಪ್ರೌಢಶಾಲೆಗಳಲ್ಲಿ ನಿಯಮಿತವಾಗಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಂತೆ ಆರೋಗ್ಯ ಇಲಾಖೆಯ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಪ್ರಮುಖ ಇಲಾಖೆಗಳು ತಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ತಮ್ಮ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ತಡೆ ಕುರಿತಂತೆ ಹೆಚ್ಚಿನ ನಿಗಾವಹಿಸಿವೆ.

ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದ್ದು, ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎನ್.ಡಿ.ಪಿ.ಎಸ್ ಕಾಯ್ದೆಯ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ಆಯೋಜಿಸಲಾಗಿದೆ. ಮಾದಕ ವಸ್ತುಗಳ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳಾದ ತಡೆಗಟ್ಟುವಿಕೆ, ಕಣ್ಗಾವಲು, ಜಾಗೃತಿ, ವ್ಯಸನಮುಕ್ತತೆ ಮತ್ತು ಜಾರಿ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ 108 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ರೂ.39,24,700 ಮೌಲ್ಯದ 93.96 ಕೆಜಿ ಗಾಂಜಾ ವನ್ನು ನಿಯಮಾನುಸಾರ ನಾಶಪಡಿಸಲಾಗಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ, ಸೇವನೆ, ಸರಬರಾಜು ತಡೆಯುವ ಉದ್ದೇಶದಿಂದ ಪೊಲೀಸ್, ಗುಪ್ತಚರ ಇಲಾಖೆ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಅಬಕಾರಿ, ಅರಣ್ಯ, ಕೃಷಿ, ಮೀನುಗಾರಿಕೆ, ರೈಲ್ವೆ, ಬಂದರು, ಅಂಚೆ ಇಲಾಖೆ, ಕಂದಾಯ ಸೇರಿದಂತೆ ಪ್ರಮುಖ ಎಲ್ಲಾ ಇಲಾಖೆಗಳು ಮಾದಕ ವಸ್ತುಗಳ ನಿರ್ಮೂಲನೆ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಅಂಚೆ ಮತ್ತು ಕೊರಿಯರ್ ಮೂಲಕ ಸ್ವೀಕೃತವಾಗುವ ಅನುಮಾನಾಸ್ಪದ ಪಾರ್ಸೆಲ್‌ಗಳನ್ನು ಕೂಡ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಕಾರವಾರ ಬಂದರಿಗೆ ಆಗಮಿಸಿಸುವ ವಿದೇಶಿ ಹಡಗುಗಳು ಮತ್ತು ಬೋಟ್ ಗಳನ್ನೂ ಕೂಡಾ ತಪಾಸಣೆ ಮಾಡಲಾಗುತ್ತಿದ್ದು, ಎನ್‌ಕಾರ್ಡ್ ಸಭೆಯನ್ನು ಪ್ರತೀ ತಿಂಗಳು ನಿಯಮಿತವಾಗಿ ನಡೆಸುವ ಮೂಲಕ ಎಲ್ಲಾ ಇಲಾಖೆಗಳಿಗೆ ಜವಾಬ್ದಾರಿ ನಿಗಧಿಗೊಳಿಸಿ, ಕಡ್ಡಾಯವಾಗಿ ವರದಿ ಪಡೆಯಲಾಗುತ್ತಿದೆ.

ಈ ಕುರಿತು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಮಾತನಾಡಿ, “ಜಿಲ್ಲೆಯಾದ್ಯಂತ ವ್ಯಾಪಕವಾಗಿ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನೂ ಕೂಡ ಆಯೋಜಿಸಲಾಗುತ್ತಿದ್ದು, ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ” ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular