ಲಖನೌ: ಕೋಚಿಂಗ್ ಹಾಗೂ ಗೇಮಿಂಗ್ ಸೆಂಟರ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ನಾಲ್ವರು ಸಜೀವದಹನವಾಗಿರುವ ಘಟನೆ ಉತ್ತರ ಪ್ರದೇಶದ ಲಖನೌದ ಅಲಿಗಂಜ್ ನಲ್ಲಿ ನಡೆದಿದೆ.
ಕೋಚಿಂಗ್ ಸೆಂಟರ್ ನಲ್ಲಿ ಬೆಂಕಿ ಅವಘಡ ಸಂಭವಿಸಿ, ಇಡೀ ಕೋಚಿಂಗ್ ಸೆಂಟರ್ ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಹೊರಬರಲಾಗದೇ ನಾಲ್ವರು ಸಜೀವದಹನವಾಗಿದ್ದಾರೆ. ಹಲವರು ತಮ್ಮ ಜೀವ ಉಳಿಸಿಕೊಳ್ಳಲು ಕಟ್ಟಡ ಮೊದಲ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ.
ಇಡೀ ಕಟ್ಟಡ ಬೆಂಕಿಯಿಂದ ಧಗ ಧಗನೆ ಉರಿಯುತ್ತಿದ್ದು, ಹಲವರು ಕೋಚಿಂಗ್ ಸೆಂಟರ್ ಒಳಗೆ ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಒಂದೆಡೆ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಮತ್ತೊಂದೆಡೆ ಕಟ್ಟಡದ ಒಳಗೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಯೂ ಬರದಿಂದ ಸಾಗಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಅಖಲಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಂಕಿ ಅವಘಡದಕ್ಕಿ ಪ್ರಾಣ ಕಳೆದುಕೊಂಡಿರುವವರ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.

