ವಾರಾಣಸಿ: ಮನೆಯಲ್ಲಿ ಅಡಿಗೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಣ್ಣ-ತಂಗಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
ಉತ್ರರ ಪ್ರದೆಶದ ಲಹರ್ತರಾ ಪ್ರದೇಶದ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಸಿಲಿಂಡರ್ ಸ್ಫೋಟದ ಭೀಕರತೆಗೆ ಮನೆ ಕುಸಿದು ಬಿದ್ದಿದ್ದು, ಸ್ಥಳದಲ್ಲೇ 30 ವರ್ಷದ ವ್ಯಕ್ತಿ ಹಾಗೂ ಅವರ ಸಹೋದರಿ ಇಬ್ಬರೂ ಮೃತಪಟ್ಟಿದ್ದಾರೆ.
ಕುಸಿದ ಮನೆಯ ಅವಶೇಷಗಳಡಿ ಕುಟುಂಬದ ಸದಸ್ಯರು ಸಿಲುಕಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಇಬ್ಬರನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರನ್ನು ಗಿರಿಜಾದೇವಿ, ಅವರ ಓರ್ವ ಪುತ್ರ ಎಂದು ಗುರುತಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಗಿರಿಜಾದೇವಿ ಅವರ ಇನ್ನೋರ್ವ ಪುತ್ರ ಅಮನ್ ಚೌದರಿ ಹಗೂ ಮಗಳು ಪ್ರೀತಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ರಾತ್ರಿಯೆ ಗ್ಯಾಸ್ ಸೋರಿಕೆಯಾಗಿದೆ. ಬೆಳಿಗ್ಗೆ ಅಡುಗೆ ಮಾಡಲು ಸ್ಟೌವ್ ಹಚ್ಚುತ್ತಿದಂತೆ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ದೇವಸ್ಥಾನದಿಂದ ಸುಮಾರು ೭ ಕಿ.ಮೀ ದೂರದಲ್ಲಿರುವ ಲಹರ್ತರಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಹಲವು ಮನೆಗಳಿಗೂ ಹಾನಿಯಾಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.

