ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಗಾಳಿ ಬೀಸಿದ ಬೆನ್ನಲ್ಲೇ ಸಚಿವ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನದ ಬಿರುಗಾಳಿಯೂ ಸಹ ಬೀಸಿದೆ.
ಜೂನ್ 3ರಂದು ಲೋಕಭವನದಲ್ಲಿ ಸಂಭ್ರಮದಿಂದ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಡಿಕೆಶಿ ಜತೆಗೆ ಜಿ ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿ ಮತ್ತು 12 ಶಾಸಕರು ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು.
ಹೀಗೆ ಎಲ್ಲವೂ ಸರಿಯಾಗಿಯೇ ಹೋಗುತ್ತಿದೆ ಎನ್ನುವ ಹೊತ್ತಿನಲ್ಲೇ ರಾಮಲಿಂಗಾರೆಡ್ಡಿ ತಮಗೆ ನೀಡಿದ ಜಲ ಸಂಪನ್ಮೂಲ ಸಚಿವ ಖಾತೆಯ ಬಗ್ಗೆ ಅಸಮಾಧಾನ ಹೊರಹಾಕಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ ಈ ಹಿಂದೆ ಡಿಕೆಶಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತನಗೆ ನೀಡುವುದಾಗಿ ಮಾತು ಕೊಟ್ಟಿದ್ದರು ಎಂದು ರಾಜೀನಾಮೆಗೆ ಕಾರಣ ಖಾತೆ ವಿಚಾರ ಎಂಬುದನ್ನು ಬಿಚ್ಚಿಟ್ಟರು.
ಹೀಗೆ ನೂತನ ಕಾಂಗ್ರೆಸ್ ಮಂತ್ರಿಮಂಡಲ ಆರಂಭವಾದ ಎರಡೇ ದಿನಕ್ಕೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸದ್ಯ ಇದೇ ಮಂತ್ರಿಮಂಡಲದಲ್ಲಿ ಆಹಾರ ಮಂತ್ರಿ ಖಾತೆಯನ್ನು ಪಡೆದುಕೊಂಡಿರುವ ಮಾಜಿ ಸ್ಪೀಕರ್ ಯುಟಿ ಖಾದರ್ ಟಿವಿ9 ಜತೆ ಮಾತನಾಡಿ ಸಚಿವ ಖಾತೆಗಳ ಬಗ್ಗೆ ಮಾತನಾಡಿ ಖಾತೆ ಮುಖ್ಯ ಅಲ್ಲ, ಕೆಲಸ ಮುಖ್ಯ ಎಂದಿದ್ದಾರೆ.
ಖಾತೆ ಕುರಿತ ಅಸಮಾಧಾನದ ಬಗ್ಗೆ ಮಾತನಾಡಿದ ಯಟಿ ಖಾದರ್ ‘ಪಕ್ಷದಲ್ಲಿ ಎದ್ದಿರುವ ಅಸಮಾಧಾನವನ್ನು ಪಕ್ಷದ ಹಿರಿಯ ನಾಯಕರಾದ ಮುಖ್ಯಮಂತ್ರಿಗಳು, ಹರಿಪ್ರಸಾದ್ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯ ಹಾಗೂ ದೇಶಕ್ಕೆ ಕೊಡುಗೆ ನೀಡುವಂತಹ ಆಡಳಿತವನ್ನು ನಡೆಸುವ ಹಾಗೆ ಯೋಜನೆಗಳನ್ನು ಹಮ್ಮಿಕೊಂಡು ಜನರ ಪ್ರೀತಿ ಗಳಿಸುತ್ತದೆ’ ಎಂದರು.
ಇನ್ನು ಯಾರಿಗೆ ಯಾವ ಖಾತೆ ಎಂದು ಚರ್ಚೆಯಾಗಿತ್ತಾ, ನಿಮಗೆ ಇದೇ ಖಾತೆ ಬೇಕು ಎಂದು ಏನಾದರೂ ಆಸೆ ಇತ್ತಾ, ನಿಮಗೆ ಆಹಾರ ಇಲಾಖೆ ಖಾತೆ ಸಿಕ್ಕಿದ್ದು ತೃಪ್ತಿ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಯುಟಿ ಖಾದರ್ ‘ಪ್ರತಿಯೊಂದು ಖಾತೆಗೂ ಅದರದ್ದೇ ಆದ ಮಹತ್ವವಿದೆ. ಇಲ್ಲಿ ಸಣ್ಣ ಖಾತೆ, ದೊಡ್ಡ ಖಾತೆ ಎಂಬುದರ ವಿಚಾರವಿಲ್ಲ. ಹೀಗಾಗಿ ಖಾತೆ ಮುಖ್ಯವಲ್ಲ, ಕೆಲಸ ಮುಖ್ಯ. ನಾನು ಖಾತೆಯನ್ನು ನೋಡಿ ಕುಳಿತುಕೊಳ್ಳುವವನಲ್ಲ. ನನಗೆ ಜನರಿಗೆ ಸಹಕಾರವಾಗುವ ಖಾತೆಯನ್ನು ಕೊಟ್ಟಿದ್ದಾರೆ. ಅದನ್ನು ನಿಭಾಯಿಸುವುದು ನಮ್ಮ ಜವಾಬ್ದಾರಿ’ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಕ್ಷದಲ್ಲಿ ಅದೇ ಖಾತೆ ಬೇಕು, ಇದೇ ಖಾತೆ ಬೇಕು ಎನ್ನುವ ಇತರೆ ಶಾಸಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

