ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಭೀಕರ ವೈಮಾನಿಕ ದಾಳಿಗೆ ಇರಾನ್ನ ಉನ್ನತ ನಾಯಕತ್ವ ಅಕ್ಷರಶಃ ನಲುಗಿದೆ. ಇರಾನ್ನ ಪ್ರಭಾವಿ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಕ್ತಾರ ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ ಸೇರಿದಂತೆ ಹಲವು ಉನ್ನತ ಮಟ್ಟದ ಸೇನಾಧಿಕಾರಿಗಳು ಈ ದಾಳಿಯಲ್ಲಿ ಹತರಾಗಿದ್ದಾರೆ.
ಹೌದು. ಇರಾನ್ನ ಅಧಿಕೃತ ಮಾಧ್ಯಮ ‘ಪ್ರೆಸ್ ಟಿವಿ’ ವರದಿ ಮಾಡಿರುವಂತೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಕ್ತಾರ ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ ಅವರು ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹತರಾಗಿದ್ದಾರೆ. ಇದರ ಬೆನ್ನಲ್ಲೇ, ಇರಾನ್ನ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಅವರನ್ನು ತಹ್ರಾನ್ನಲ್ಲಿ ಗುರಿ ಮಾಡಲಾಗಿದ್ದು, ಅವರು ಕೂಡ ಹತರಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಖಚಿತಪಡಿಸಿದೆ.
ಫೆಬ್ರವರಿ 28ರಂದು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರದ 20 ದಿನಗಳಲ್ಲಿ ಇರಾನ್ ಮೇಲೆ ನಡೆದ ಅತ್ಯಂತ ದೊಡ್ಡ ಪ್ರಹಾರ ಇದಾಗಿದೆ. ಇಸ್ರೇಲ್ ರಕ್ಷಣಾ ಪಡೆ (IDF) ಈ ಹತ್ಯೆಯನ್ನು ಖಚಿತಪಡಿಸಿದ್ದು, ಇರಾನ್ನ ಆಂತರಿಕ ಭದ್ರತೆ ಮತ್ತು ಜಾಗತಿಕ ಭಯೋತ್ಪಾದಕ ಚಟುವಟಿಕೆಗಳ ಸಂಚುಗಾರರನ್ನು ಈ ಮೂಲಕ ಮಟ್ಟಹಾಕಲಾಗಿದೆ ಎಂದು ಹೇಳಿದೆ. ಈ ಬೆನ್ನಲ್ಲೇ ಇರಾನ್ ಅಧ್ಯಕ್ಷರು ಇಸ್ರೇಲ್ನ ಈ ನಡೆಯನ್ನು ‘ಹೇಡಿತನದ ಕೃತ್ಯ’ ಎಂದು ಕಿಡಿಕಾರಿದ್ದು, ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಫೆಬ್ರವರಿ 28 ರಂದು ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಇರಾನ್ನ ಮಿಲಿಟರಿ ಮತ್ತು ರಾಜಕೀಯ ನಾಯಕತ್ವದ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ.
ಅಲಿ ಲಾರಿಜಾನಿ: ಇರಾನ್ನ ಭದ್ರತಾ ಮುಖ್ಯಸ್ಥ ಮತ್ತು ಮಾಜಿ ಸುಪ್ರೀಂ ಲೀಡರ್ ಖಮೇನಿ ಅವರ ಆಪ್ತ ಅಲಿ ಲಾರಿಜಾನಿ ಸೋಮವಾರ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದು ಕಳೆದ 19 ದಿನಗಳಲ್ಲಿ ಇರಾನ್ ನಾಯಕತ್ವಕ್ಕೆ ಬಿದ್ದ ಅತಿದೊಡ್ಡ ಪೆಟ್ಟು ಎನ್ನಲಾಗಿದೆ.
ಘೋಲಮ್ರೆಜಾ ಸುಲೇಮಾನಿ : ಬಸಿಜ್ ಅರೆಸೇನಾ ಪಡೆಯ ಮುಖ್ಯಸ್ಥರಾಗಿದ್ದ ಇವರು ಕೂಡ ಮಂಗಳವಾರ ನಡೆದ ದಾಳಿಯಲ್ಲಿ ಹತರಾಗಿದ್ದಾರೆ.
ಇಸ್ರೇಲ್ ಆರೋಪ: ಕೊಲ್ಲಲ್ಪಟ್ಟ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಅವರು 2022-23ರ ಮಹ್ಸಾ ಅಮಿನಿ ಪ್ರತಿಭಟನೆಯ ಸಮಯದಲ್ಲಿ ಪ್ರತಿಭಟನಾಕಾರರ ಹತ್ಯೆ ಮತ್ತು ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಇಸ್ರೇಲ್ ಆರೋಪಿಸಿದೆ. ಅಲ್ಲದೆ, ಜಗತ್ತಿನಾದ್ಯಂತ ಇಸ್ರೇಲಿಗಳು ಮತ್ತು ಅಮೆರಿಕನ್ನರ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಇವರು ಮುನ್ನಡೆಸುತ್ತಿದ್ದರು ಎಂದು ಐಡಿಎಫ್ ತಿಳಿಸಿದೆ.
ಇರಾನ್ ಪ್ರತಿಕ್ರಿಯೆ: ಈ ಘಟನೆಗಳನ್ನು ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರು “ನಮ್ಮ ಸಹೋದ್ಯೋಗಿಗಳ ಹೇಡಿತನದ ಹತ್ಯೆ” ಎಂದು ಖಂಡಿಸಿದ್ದಾರೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮಾತನಾಡಿ, “ಒಬ್ಬ ವ್ಯಕ್ತಿಯ ಅನುಪಸ್ಥಿತಿಯಿಂದ ಇರಾನ್ನ ರಾಜಕೀಯ ವ್ಯವಸ್ಥೆ ಕುಸಿಯುವುದಿಲ್ಲ. ಇರಾನ್ ಅತ್ಯಂತ ಭದ್ರವಾದ ರಾಜಕೀಯ ಮತ್ತು ಆರ್ಥಿಕ ಮೂಲಸೌಕರ್ಯವನ್ನು ಹೊಂದಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

