ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಮಧ್ಯಾಹ್ನದ ಊಟಕ್ಕೆಂದು ಕೇವಲ ‘ಪಾಲಕ್ ಪನೀರ್’ ಬಿಸಿ ಮಾಡಿದ ಘಟನೆ, ಇಬ್ಬರು ಭಾರತೀಯ ಸಂಶೋಧನಾ ವಿದ್ಯಾರ್ಥಿಗಳ ಬದುಕನ್ನೇ ಬದಲಿಸಿದೆ. ಜನಾಂಗೀಯ ತಾರತಮ್ಯದ ವಿವಾದವಾಗಿ ರೂಪಾಂತರಗೊಂಡ ಈ ಘಟನೆಯು ಅಂತಿಮವಾಗಿ ವಿದ್ಯಾರ್ಥಿಗಳಿಗೆ ಸುಮಾರು 1.80 ಕೋಟಿ ರೂಪಾಯಿ (2 ಲಕ್ಷ ಡಾಲರ್) ಪರಿಹಾರ ನೀಡುವಲ್ಲಿ ಅಂತ್ಯಗೊಂಡಿದೆ.
ಘಟನೆಯ ಹಿನ್ನೆಲೆ: ಪಾಲಕ್ ಪನೀರ್ ಮತ್ತು ವಾಸನೆಯ ತಕರಾರು ಸೆಪ್ಟೆಂಬರ್ 5, 2023 ರಂದು ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಮಾಡುತ್ತಿದ್ದ ಆದಿತ್ಯ ಪ್ರಕಾಶ್ ಅವರು ಇಲಾಖೆಯ ಮೈಕ್ರೋವೇವ್ನಲ್ಲಿ ತಮ್ಮ ಊಟವನ್ನು ಬಿಸಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸಿಬ್ಬಂದಿಯೊಬ್ಬರು, ಆಹಾರದ ವಾಸನೆ ಅಸಹ್ಯವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಇಲ್ಲಿ ಆಹಾರ ಬಿಸಿ ಮಾಡಬೇಡಿ ಎಂದು ತಾಕೀತು ಮಾಡಿದರು. ಆದಿತ್ಯ ಅವರು ಶಾಂತವಾಗಿಯೇ ಪ್ರತಿಕ್ರಿಯಿಸಿದರೂ, ಇದು ಮುಂದೆ ದೊಡ್ಡ ವಿವಾದಕ್ಕೆ ನಾಂದಿಯಾಯಿತು.
ತಾರತಮ್ಯ ಮತ್ತು ಪ್ರತಿಕಾರ ಆದಿತ್ಯ ಪ್ರಕಾಶ್ ಮತ್ತು ಅವರ ಸಂಗಾತಿ ಊರ್ಮಿ ಭಟ್ಟಾಚಾರ್ಯ ಅವರ ಪ್ರಕಾರ, ಅಂದಿನಿಂದ ಅವರ ಮೇಲೆ ನಿರಂತರ ತಾರತಮ್ಯ ಆರಂಭವಾಯಿತು. ಇಲಾಖೆಯ ಅಡುಗೆಮನೆಯ ನೀತಿಯು ದಕ್ಷಿಣ ಏಷ್ಯಾದ ಜನರ ಆಹಾರ ಪದ್ಧತಿಯನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ ಎಂದು ಅವರು ಆರೋಪಿಸಿದರು. ಇದಾದ ಎರಡು ದಿನಗಳ ನಂತರ ಉಳಿದ ಭಾರತೀಯ ವಿದ್ಯಾರ್ಥಿಗಳು ಕ್ಯಾಂಪಸ್ಗೆ ಭಾರತೀಯ ಆಹಾರ ತಂದಾಗ, ಇವರು ‘ದಂಗೆ ಏಳಲು ಪ್ರಚೋದಿಸುತ್ತಿದ್ದಾರೆ’ ಎಂಬ ವಿಲಕ್ಷಣ ಆರೋಪ ಕೂಡ ಕೇಳಿಬಂದಿತ್ತು.
ಈ ವಿವಾದದ ಬೆನ್ನಲ್ಲೇ ಊರ್ಮಿ ಅವರಿಗೆ ನೀಡಲಾಗಿದ್ದ ಬೋಧನಾ ಸಹಾಯಕಿ (Teaching Assistant) ಹುದ್ದೆಯನ್ನು ಯಾವುದೇ ಕಾರಣ ನೀಡದೆ ಕಿತ್ತುಕೊಳ್ಳಲಾಯಿತು. ತಮ್ಮ ಮೇಲೆ ನಡೆಯುತ್ತಿರುವ ಮಾನಸಿಕ ಕಿರುಕುಳದ ವಿರುದ್ಧ ಈ ಜೋಡಿ ಅಮೆರಿಕದ ಫೆಡರಲ್ ನಾಗರಿಕ ಹಕ್ಕುಗಳ ನ್ಯಾಯಾಲಯದಲ್ಲಿ ದಾವೆ ಹೂಡಿತು.
1.80 ಕೋಟಿ ರೂ. ಪರಿಹಾರ ಮತ್ತು ಸ್ವದೇಶಕ್ಕೆ ವಾಪಸ್ ಸುಮಾರು ಎರಡು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಸೆಪ್ಟೆಂಬರ್ 2025 ರಲ್ಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳೊಂದಿಗೆ ರಾಜಿ ಮಾಡಿಕೊಂಡಿತು. ಒಪ್ಪಂದದ ಪ್ರಕಾರ ವಿಶ್ವವಿದ್ಯಾಲಯವು ಈ ಜೋಡಿಗೆ 2 ಲಕ್ಷ ಡಾಲರ್ (ಅಂದಾಜು 1.80 ಕೋಟಿ ರೂ.) ಪರಿಹಾರ ಧನ ನೀಡಿದೆ. ಅಲ್ಲದೆ ಅವರಿಗೆ ಸ್ನಾತಕೋತ್ತರ (Master’s) ಪದವಿಗಳನ್ನು ನೀಡಿ ಗೌರವಿಸಿದೆ. ಆದರೆ ಮುಂದಿನ ದಿನಗಳಲ್ಲಿ ಅವರು ಈ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಅಥವಾ ಶಿಕ್ಷಣ ಪಡೆಯುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.
ತಮ್ಮ ಆತ್ಮಗೌರವಕ್ಕಾಗಿ ಹೋರಾಡಿ ಗೆದ್ದ ಆದಿತ್ಯ ಪ್ರಕಾಶ್ ಮತ್ತು ಊರ್ಮಿ ಭಟ್ಟಾಚಾರ್ಯ ಅವರು ಈ ತಿಂಗಳ ಆರಂಭದಲ್ಲಿ ಶಾಶ್ವತವಾಗಿ ಭಾರತಕ್ಕೆ ಮರಳಿದ್ದಾರೆ. “ನನ್ನ ಆಹಾರವೇ ನನ್ನ ಹೆಮ್ಮೆ. ಯಾವುದು ಸುವಾಸನೆ ಮತ್ತು ಯಾವುದು ದುರ್ವಾಸನೆ ಎಂಬುದು ಸಂಸ್ಕೃತಿಯ ಮೇಲೆ ನಿರ್ಧಾರವಾಗುತ್ತದೆ” ಎಂದು ಆದಿತ್ಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

