HomeLatest NewsBREAKING NEWS: ರಾಜ್ಯಕ್ಕೆ ಬರಬೇಕಾದ ಅನುದಾನ ನೀಡಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಿಎಂ...

BREAKING NEWS: ರಾಜ್ಯಕ್ಕೆ ಬರಬೇಕಾದ ಅನುದಾನ ನೀಡಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಿಎಂ ಸಿದ್ಧರಾಮಯ್ಯ ಮನವಿ

ನವದೆಹಲಿ: ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೆಳವಣಿಗೆಗೆ ಪೂರಕವಾಗಿರುವ ವಿಧಾನವನ್ನು ಅನುಸರಿಸಲು 16ನೇ ಹಣಕಾಸು ಆಯೋಗಕ್ಕೆ ಪ್ರತಿಪಾದಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸಲಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

15ನೇ ಹಣಕಾಸು ಆಯೋಗವು ತನ್ನ ಶಿಫಾರಸ್ಸಿನಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ.4.713 ರಿಂದ ಶೇ.3.647 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯದ ತೆರಿಗೆ ಪಾಲು 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.23ರಷ್ಟು ಕಡಿಮೆಯಾಗಿದೆ. ಇದಲ್ಲದೆ, 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶಿಫಾರಸ್ಸು ಮಾಡಿದ್ದ ರೂ.11,495 ಕೋಟಿಗಳ ವಿಶೇಷ ಅನುದಾನವು ಸಿಗದ ಕಾರಣ, ಒಟ್ಟಾರೆಯಾಗಿ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಟ್ಟು ರೂ.80,000 ಕೋಟಿಗಳು ರಾಜ್ಯಕ್ಕೆ ನಷ್ಟವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

15ನೇ ಹಣಕಾಸು ಆಯೋಗವು ರಾಜ್ಯಗಳ ನಡುವೆ ತೆರಿಗೆ ಹಂಚಿಕೆಯ ಸುತ್ರವನ್ನು ಲೆಕ್ಕಮಾಡಲು ಆದಾಯ-ದೂರ (income-distance) ಮಾನದಂಡದ ಮೇಲೆ ಅತಿಯಾಗಿ ಅವಲಂಬಿಸಿದ ಕಾರಣ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಹೆಚ್ಚಿನ ನಷ್ಟವಾಯಿತು. 15ನೇ ಹಣಕಾಸು ಆಯೋಗವು ಆದಾಯ-ದೂರ ಮಾನದಂಡಕ್ಕೆ ಶೇ.45 ರಷ್ಟು ಅಂಕವನ್ನು ನೀಡಿತ್ತು. ರಾಜ್ಯಕ್ಕೆ ಇದರಿಂದ ಉಂಟಾದ ನಷ್ಟವನ್ನು ತಪ್ಪಿಸುವ ಸಲುವಾಗಿ ಆದಾಯ-ದೂರ ಮಾನದಂಡದ ಅಂಕವನ್ನು ಶೇ.20 ರಷ್ಟು ಕಡಿಮೆ ಮಾಡಿ, ದೇಶದ ಆರ್ಥಿಕ ಪ್ರಗತಿಗೆ (GDP) ರಾಜ್ಯಗಳು ನೀಡುವ ಕೊಡುಗೆಯನ್ನು ಪರಿಗಣಿಸಬೇಕು ಹಾಗೂ ಇದಕ್ಕೆ ಶೇ.20 ರಷ್ಟು ಅಂಕವನ್ನು ನೀಡಬೇಕೆಂದು ಮನವಿ ಮಾಡಿದ್ದೇನೆ.

ಹಣಕಾಸು ಆಯೋಗವು ಶಿಫಾರಸ್ಸು ಮಾಡುವ ರಾಜಸ್ವ ಕೊರತೆ ಅನುದಾನಗಳನ್ನು ನಿಲ್ಲಿಸಲು ನಾವು ವಿನಂತಿಸಿದ್ದೇವೆ, ಏಕೆಂದರೆ ಅವು ವಿತ್ತೀಯ ಹೊಣೆಗಾರಿಕೆ ಅಧಿನಿಯಮದ (FRBM) ಚೌಕಟ್ಟಿನಲ್ಲಿ ಪ್ರಸ್ತಾಪಿಸಲಾದ ಆರ್ಥಿಕ ಶಿಸ್ತಿನ ತತ್ವಗಳಿಗೆ ವಿರುದ್ಧವಾಗಿವೆ. 15ನೇ ಹಣಕಾಸು ಆಯೋಗವು ಒಟ್ಟು ಕೇಂದ್ರ ಸ್ವೀಕೃತಿಗಳ ಶೇ.1.92 ರಷ್ಟನ್ನು ರಾಜಸ್ವ ಕೊರತೆ ಅನುದಾನಗಳೆಂದು ಶಿಫಾರಸ್ಸು ಮಾಡಿತ್ತು. ಆದ್ದರಿಂದ ಕೇಂದ್ರ ಸರ್ಕಾರದ ಒಟ್ಟು ಸ್ವೀಕೃತಿಗಳ ಶೇ.1.92 ರಷ್ಟು ಮೊತ್ತವನ್ನು ತೆರಿಗೆ ಹಂಚಿಕೆಯ ಸೂತ್ರದ ಆಧಾರದ ಮೇಲೆ ಎಲ್ಲಾ ರಾಜ್ಯಗಳಿಗೂ ಹಂಚಿಕೆ ಮಾಡಬೇಕೆಂದು ಹಣಕಾಸು ಆಯೋಗದ ಮುಂದೆ ಪ್ರಸ್ತಾಪಿಸಿದ್ದೇವೆ.

ಬೆಂಗಳೂರು, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅಭಿವೃದ್ಧಿ ಸವಾಲುಗಳನ್ನು ಸಹ ಪ್ರಸ್ತಾಪಿಸಿ, ರಾಜ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ನ್ಯಾಯಯುತ ಮತ್ತು ಬೆಳವಣಿಗೆಗೆ ಪೂರಕವಾಗುವ ತೆರಿಗೆ ಹಂಚಿಕೆಯ ಅವಶ್ಯಕತೆಯನ್ನು ವಿತ್ತಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.

ಕರ್ನಾಟಕದ ಪ್ರಸ್ತಾವನೆಗಳು ವಿಶೇಷ ಪ್ರಕರಣವೆಂದು ಪರಿಗಣಿಸದೆ, ಇದು ಒಟ್ಟಾರೆ ರಾಷ್ಟ್ರೀಯ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಪ್ರಸ್ತಾವನೆಗಳಾಗಿವೆ ಎಂದು ಪರಿಗಣಿಸಬೇಕು.

16ನೇ ಹಣಕಾಸು ಆಯೋಗಕ್ಕೆ ಕೇಂದ್ರ ಸರ್ಕಾರ ಸಲ್ಲಿಸುವ ಜ್ಞಾಪಕ ಪತ್ರದಲ್ಲಿ ರಾಜ್ಯ ಸರ್ಕಾರದ ಈ ಪ್ರಸ್ತಾವನೆಗಳನ್ನು ಸೇರಿಸುವಂತೆ ಮನವಿ ಮಾಡಲಾಗಿದ್ದು, ಎಲ್ಲಾ ರಾಜ್ಯಗಳು ದೇಶದ ಅಭಿವೃದ್ಧಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಬೆಳವಣಿಗೆ ಆಧಾರಿತ ತೆರಿಗೆ ಹಂಚಿಕೆ ಅವಶ್ಯಕ ಎಂಬುದನ್ನು ತಿಳಿಸಿದ್ದೇನೆ. ನಮ್ಮ ಎಲ್ಲಾ ಕೋರಿಕೆಗಳಿಗೆ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಭಾವಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular