ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ಬೆಂಗಳೂರಿನಿಂದ ಹಾಸನಕ್ಕೆ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವಿಕ್ರಂ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ತೋರಿದ್ದಾರೆ.
ಬೆಂಗಳೂರು -ಹಾಸನ ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ವಿಕ್ರಂ ಗಾಯಗೊಂಡಿದ್ದರು. ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ನರಳಾಡುತ್ತಿದ್ದರೂ ಅವರನ್ನು ಯಾರೂ ಗಮನಿಸಿರಲಿಲ್ಲ. ಅದೇ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದ ಕುಮಾರಸ್ವಾಮಿ ಗಾಯಾಳು ವಿಕ್ರಂ ಅವರನ್ನು ಗಮನಿಸಿದ್ದು, ತಮ್ಮ ಬೆಂಗಾಗಲು ವಾಹನದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲದೇ, ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಗಾಯಾಳು ವಿಕ್ರಂ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಕುಮಾರಸ್ವಾಮಿಯವರ ಮಾನವೀಯ ಸ್ಪಂದನೆಗೆ ಗಾಯಾಳು ವಿಕ್ರಂ ಧನ್ಯವಾದ ಹೇಳಿದ್ದಾರೆ.

