ಬೆಂಗಳೂರು: UGNEET-26 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆಯ ಎರಡನೇ ಸುತ್ತಿಗೆ ಹೆಚ್ಚುವರಿಯಾಗಿ 150 ವೈದ್ಯಕೀಯ ಸೀಟು ಲಭ್ಯವಾಗಿದ್ದು, ಆಸಕ್ತರು ಸೆ.9ರವರೆಗೆ ಆಪ್ಷನ್ಸ್ ದಾಖಲಿಸಬಹುದು.
ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 100 ಸೀಟು ಹಾಗೂ ಫಾರೂಕಿಯ ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿಯಾಗಿ 50 ಸೀಟು ಲಭ್ಯವಾಗಿವೆ. ಬಾಗಲಕೋಟೆಯದು ಹೊಸ ಕಾಲೇಜಾಗಿರುವ ಕಾರಣ ಆ ಕಾಲೇಜಿಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ.
ಎರಡನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಲಾಗಿನ್ ಆಗಿ ಒಪ್ಪಿಗೆ ಸೂಚಿಸಬೇಕು. ಆಪ್ಷನ್ಸ್ ಅದಲು- ಬದಲು ಮಾಡಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಚಾಯ್ಸ್-2 ಮತ್ತು ಚಾಯ್ಸ್-3 ಆಯ್ಕೆ ಮಾಡಿರುವವರು ಹಾಗೂ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಮೂರನೇ ಸುತ್ತಿನ ಸೀಟು ಹಂಚಿಕೆ
UGCET-2026: ಎಂಜನಿಯರಿಂಗ್, ಪಶು ವೈದ್ಯಕೀಯ ಸೇರಿದಂತೆ ಇತರ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಸೆ.10ರೊಳಗೆ ನಿಗದಿತ ಶುಲ್ಕ ಪಾವತಿಸಿ (ಪಾವತಿಸದೇ ಇದ್ದಲ್ಲಿ) ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ಸೆ.11ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು.
ಇದು ಕಡ್ಡಾಯ ಪ್ರವೇಶ ಆಗಿದೆ. ಸೀಟು ರದ್ದತಿ ಕೋರಿ ಸಲ್ಲಿಸುವ ಮನವಿಗಳನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸುವುದಿಲ್ಲ. ಕಾಲೇಜಿಗೆ ಪ್ರವೇಶ ಪಡೆಯದೆ ಇರುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ಪೊಲೀಸ್ ನೇಮಕಾತಿ ಲಿಖಿತ ಪರೀಕ್ಷೆ ಕೀ ಉತ್ತರ ಪ್ರಕಟ
ನಗರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ(CAR/DAR) ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸೆ.6ರಂದು ಲಿಖಿತ ಪರೀಕ್ಷೆ ನಡೆದಿದ್ದು ಅದಕ್ಕೆ ಸಂಬಂಧಿಸಿದಂತೆ ಸೆ.7ರಂದು ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.
ಈ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಕೆಇಎ ಪೋರ್ಟಲ್ ನಲ್ಲಿನ ಲಿಂಕ್ ಮೂಲಕ ಸಲ್ಲಿಸಬಹುದು. ಇದಕ್ಕೆ ಸೆ.9ರಂದು ಬೆಳಿಗ್ಗೆ 10.30ರವರೆಗೆ ಅವಕಾಶ ನೀಡಲಾಗಿದೆ.
ಪೂರ್ಣ ಮಾಹಿತಿಯೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು. ಪ್ರತಿ ಆಕ್ಷೇಪಣೆಗೂ ₹25 ಪಾವತಿಸಬೇಕು. ವಿಷಯ ತಜ್ಞರ ಸಮಿತಿ ಆಕ್ಷೇಪಣೆಗಳನ್ನು ಪರಿಶೀಲಿಸಿ ಪ್ರಕಟಿಸುವ ಕೀ ಉತ್ತರಗಳು ಅಂತಿಮವಾಗಿರುತ್ತವೆ.
ಯಶಸ್ವಿಯಾಗಿ ನಡೆದ ಪರೀಕ್ಷೆ
ನಗರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (CAR/ DAR ) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ KEA ಭಾನುವಾರ ಅತ್ಯಂತ ಯಶಸ್ವಿಯಾಗಿ ಲಿಖಿತ ಪರೀಕ್ಷೆ ನಡೆಸಿತು.
ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ 1,42,220 ಮಂದಿ ಪೈಕಿ 1,14,079 ( ಶೇ 80) ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಕಲ್ಯಾಣ ಕರ್ನಾಟಕದ ಒಟ್ಟು 32,191 ಅಭ್ಯರ್ಥಿಗಳ ಪೈಕಿ 28,849 (ಶೇ 90) ಮಂದಿ ಹಾಜರಾಗಿದ್ದರು.
ಬೆಳಗಿನ ಅವಧಿಯ 309 ಹಾಗೂ ಮಧ್ಯಾಹ್ನದ 60 ಕೇಂದ್ರಗಳಲ್ಲಿ ಯಾವುದೇ ಗೊಂದಲ ಇಲ್ಲದೆ ಪರೀಕ್ಷೆ ನಡೆಯಿತು. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
ಬೆಂಗಳೂರಿನ KEA ಕಚೇರಿಯಲ್ಲಿ ಸ್ಥಾಪಿಸಿದ್ದ ಕಮಾಂಡ್ ಸೆಂಟರ್ ನಿಂದಲೇ ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡುವ ವ್ಯವಸ್ಥೆ ಮಾಡಲಾಗಿತ್ತು.
ಪರೀಕ್ಷೆ ಮುಗಿದ ನಂತರ ಕೆಇಎ ತಲುಪಿದ OMR ಉತ್ತರ ಪತ್ರಿಕೆಗಳನ್ನು ತಕ್ಷಣವೇ ಸ್ಕ್ಯಾನ್ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಕೆಲಸ ಕೂಡ ಮಾಡಲಾಗಿದ್ದು, ಇದೊಂದು ಪಾರದರ್ಶಕ ಕ್ರಮವಾಗಿದ್ದು, ಯಾರು ಬೇಕಾದರೂ OMR ಪ್ರತಿಗಳನ್ನು ನೋಡಬಹುದು.

