ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 20 ರಿಂದ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೋರಾಟ ನಡೆಸುವುದಾಗಿ ಆರೋಗ್ಯ ಕವಚ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ 108 ಆಂಬುಲೆನ್ಸ್ ನೌಕರರು ಎಚ್ಚರಿಕೆ ನೀಡಿದ್ದಾರೆ.
ಸುವರ್ಣ ಕರ್ನಾಟಕ ಆರೋಗ್ಯ ಕವಚ 108 ಆಂಬುಲೆನ್ಸ್ ನೌಕರರ ಸಂಘ, ಕರ್ನಾಟಕ ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘದ ಪದಾಧಿಕಾರಿಗಳು ಈ ಬಗ್ಗೆ ಆರೋಗ್ಯ ಸಚಿವರು ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಜಿವಿಕೆ ಗ್ರೀನ್ ಹೆಲ್ತ್ ಇಎಂಆರ್‌ಐ ಸಂಸ್ಥೆಯ ಅಧೀನದಲ್ಲಿ 35,000 ಕಾರ್ಮಿಕರು ನೇಮಕವಾಗಿದ್ದೇವೆ. ನೇಮಕಾತಿಯ ಸಂದರ್ಭದಲ್ಲಿ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ 2017 ರಿಂದ 2022ರ ವರೆಗೆ ಯಾವುದೇ ವೇತನ ಹೆಚ್ಚಳ ಆಗಿಲ್ಲ. ಹೀಗಾಗಿ ಪ್ರತಿ ವರ್ಷ 108 ಆಂಬುಲೆನ್ಸ್ ನೌಕರರ ವೇತನ ಪರಿಷ್ಕರಿಸಬೇಕು. 3 ಪಾಳಿಯಲ್ಲಿ ಆಂಬುಲೆನ್ಸ್ ವಾಹನದ ಸೌಕರ್ಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಲಯವಾರು ವಿಂಗಡಣೆ ಮಾಡಿ ನಿಗದಿ ಮಾಡಿರುವ ವೇತನ ರದ್ದುಪಡಿಸಿ ಏಕರೂಪ ವಲಯವಾಗಿ ಬದಲಾಯಿಸಬೇಕು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಜೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿಪಡಿಸಬೇಕು. ಕಾರ್ಮಿಕ ಇಲಾಖೆ ಪ್ರಕಾರ ಪ್ರತಿ ತಿಂಗಳ 7ರ ಒಳಗೆ ವೇತನ ನೀಡಬೇಕು. ಎಲ್ಲಾ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ, ಆಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಲಾಗಿದೆ.
ಸೆಪ್ಟೆಂಬರ್ 4ರಂದು ಸಂಘದ ಪದಾಧಿಕಾರಿಗಳು ಪತ್ರ ಬರೆದು 15 ದಿನಗಳ ಒಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಸೆಪ್ಟೆಂಬರ್ 20 ರಿಂದ ಸಾಮೂಹಿಕ ರಾಜೀನಾಮೆ ನೀಡಿ ಹೋರಾಟ ನಡೆಸಲಾಗುವುದು ನಂತರದ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಠಿಣ ಕ್ರಮದ ಎಚ್ಚರಿಕೆ
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಮುಷ್ಕರದಿಂದಾಗಿ ರೋಗಿಗಳಿಗೆ ತೊಂದರೆಯಾದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆಂಬುಲೆನ್ಸ್ ಚಾಲಕರಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಕಂಪನಿಯೊಂದಿಗೆ ಮಾತುಕತೆ ನಡೆಸಬೇಕು. ಕಂಪನಿಗೆ ತಮ್ಮ ಚಾಲಕರು ಮತ್ತು ನಿರ್ವಾಹಕರನ್ನು ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ಕಂಪನಿ ಬಿಟ್ಟು ಹೋಗಬೇಕು ಎಂದು ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ
ದಾವಣಗೆರೆ: ತಾಲ್ಲೂಕಿನ ಶಿಶು ಅಭಿವೃದ್ಧಿ ‘ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 01 ಅಂಗನವಾಡಿ ಕಾರ್ಯಕರ್ತೆ ಗೌರವ ಸೇವೆಯ ಹುದ್ದೆಗೆ ನೇಮಕ ಮಾಡಲು ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪ ಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 14 ರವರೆಗೆ. ಕೊನೆಯ ದಿನವಾಗಿರುತ್ತೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ದಾವಣಗೆರೆ ದುರ್ಗಾಂಭಿಕ ಶಾಲೆ ಎದುರು, ನಂದ ಗೋಕುಲ ಬಿಲ್ಡಿಂಗ್, ಸರಸ್ವತಿ ನಗರ, ದಾವಣಗೆರೆ ಇಲ್ಲಿಗೆ ಖುದ್ದಾಗಿ ಬಂದು ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದೆಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.

