ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಸೇರುವಾಗ 7.5% ವಿಶೇಷ ಮೀಸಲಾತಿ ನೀಡುವ ʻವಿದ್ಯಾರ್ಥಿ ಸಹಾಯಹಸ್ತʼ ಯೋಜನೆ ಜಾರಿಗೆ ತರುವ ಉದ್ದೇಶದಿಂದ “ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ) ನಿಯಮಗಳು, 2006″ಕ್ಕೆ ತಿದ್ದುಪಡಿ ತಂದು ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಇದಕ್ಕೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.
ಈ ತಿದ್ದುಪಡಿ ಅಧಿಸೂಚನೆಯನ್ನು ʻಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ (ತಿದ್ದುಪಡಿ) ನಿಯಮಗಳು, 2026” ಎಂದು ಕರೆಯಲಾಗುತ್ತದೆ. ಇದುವರೆಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಒಟ್ಟಾರೆ 15% ಮೀಸಲಾತಿ ನೀಡಲಾಗುತ್ತಿತ್ತು. ಇದರಲ್ಲಿ ಇನ್ನುಮುಂದೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇಕಡ 7.5ರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಯಾವುದೇ (ಖಾಸಗಿ ಸೇರಿದಂತೆ) ಶಿಕ್ಷಣ ಸಂಸ್ಥೆಗಳು/ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ಗ್ರಾಮೀಣ ಅಭ್ಯರ್ಥಿಗಳಿಗೆ ಶೇಕಡ 7.5 ರಷ್ಟು ಮೀಸಲಾತಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ತೀರ್ಮಾನ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಮ್ಮ ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿರುವ ಈ ಹೊತ್ತಿನಲ್ಲಿ ಅಪ್ಪಾಜಿಯವರನ್ನು ನಾನು ಬಹಳವಾಗಿ ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಮೀಸಲಾತಿ ದೊರೆಯುವಂತೆ ಮಾಡಿದವರೇ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು. ಅವರು ಮುಖ್ಯಮಂತ್ರಿಗಳಾಗಿದ್ದಾಗ ಗ್ರಾಮೀಣ ಭಾಗದ ಯುವಜನರು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ, ಆಡಳಿತ ಯಂತ್ರದ ಭಾಗವಾಗಬೇಕೆಂಬ ಉದ್ದೇಶದಿಂದ ಗ್ರಾಮೀಣ ಕೃಪಾಂಕ ನೀಡುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದರು. ನಂತರ ನ್ಯಾಯಾಲಯದ ಆದೇಶದಂತೆ ಗ್ರಾಮೀಣ ಅಭ್ಯರ್ಥಿಗಳಿಗೆ ಕೃಪಾಂಕ ನೀಡುವ ಬದಲಾಗಿ, ಮೀಸಲಾತಿಯನ್ನು ಜಾರಿಗೆ ತರಲಾಯಿತು. ವೃತ್ತಿಪರ ಕೋರ್ಸ್‌ಗಳಿಗೆ ಸೇರುವಾಗ ಗ್ರಾಮೀಣ ವಿದ್ಯಾರ್ಥಿಗಳಿಗೆ, ಸರ್ಕಾರಿ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಈಗ ಶೇಕಡ 15 ರಷ್ಟು ಮೀಸಲಾತಿ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.
ನಾನು ಶಿಕ್ಷಣ ಸಚಿವನಾಗಿರುವಾಗ, ಈ ಮೀಸಲಾತಿಯಲ್ಲಿ ಇನ್ನೊಂದಿಷ್ಟು ಸುಧಾರಣೆ ತಂದು, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಈ ಮೀಸಲಾತಿಯ ಲಾಭ ಖಚಿತವಾಗಿ ದೊರೆಯುವಂತೆ ಮಾಡುತ್ತಿದ್ದೇನೆ. ಈ ಕಾರ್ಯ ನನ್ನಲ್ಲಿ ಒಂದು ರೀತಿಯಲ್ಲಿ ತೃಪ್ತಿ, ಸಾರ್ಥಕತೆಯ ಭಾವ ಮೂಡಿಸಿದೆ. ಗ್ರಾಮೀಣ ಮಕ್ಕಳ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಕ್ರಾಂತಿಕಾರಕ ತೀರ್ಮಾನವನ್ನು ಅಂದೇ ತೆಗೆದುಕೊಂಡಿದ್ದ ಅಪ್ಪಾಜಿಗೆ ಇದೆಲ್ಲದರ ಗೌರವ ಸಲ್ಲಬೇಕು ಎಂದು ಹೇಳಿದ್ದಾರೆ.
ಉಚಿತ ಪಠ್ಯ ಪುಸ್ತಕ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೀಡಲು ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಶಾಲಾ ದಾಖಲಾತಿಯಲ್ಲಿ ಮಕ್ಕಳ ಸಂಖ್ಯೆಯಲ್ಲಿ ತೀವ್ರ ಪ್ರಮಾಣದ ಹೆಚ್ಚಳವಾಗಿದ್ದರಿಂದ ಪಠ್ಯಪುಸ್ತಕ ಪೂರೈಕೆಯಲ್ಲಿ ಅಲ್ಪಪ್ರಮಾಣದ ವ್ಯತ್ಯಯ ಉಂಟಾಗಿದ್ದು, ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶೂ-ಸಾಕ್ಸ್‌ಒದಗಿಸಲು ರಾಜ್ಯಮಟ್ಟದಲ್ಲಿ ಟೆಂಡರ್‌ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ವರ್ಷದಿಂದಲೇ ಉಚಿತ ನೋಟ್‌ಪುಸ್ತಕವನ್ನು ವಿತರಿಸಲಾಗುತ್ತಿದೆ. ಗ್ರಾಮೀಣ ಮಕ್ಕಳಿಗೆ ನಗರ ಜೀವನವನ್ನು ಪರಿಚಯಿಸುವ ಸದುದ್ದೇಶದಿಂದ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಟಾನಗೊಳಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

