ಬೆಂಗಳೂರು: UGCET-2026: ಎಂಜಿನಿಯರಿಂಗ್ ಸೇರಿದಂತೆ UGCET ಕೋರ್ಸ್ ಗಳ 3ನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣ ಆಗಿದ್ದು, ಒಪ್ಪಂದದ ಪ್ರಕಾರ ಉಳಿಕೆ ಸೀಟುಗಳನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಹಸ್ತಾಂತರಿಸಿದೆ.
ಎಲ್ಲ ವಿಧದ ಎಂಜಿನಿಯರಿಂಗ್ ಕೋರ್ಸ್ ಗಳ 24,283 ಸೀಟು ಹಾಗೂ ಆರ್ಕಿಟೆಕ್ಚರ್ ಕೋರ್ಸ್ ನ 252 ಸೀಟು ಹಂಚಿಕೆಯಾಗದೆ ಉಳಿದಿವೆ.
ಎಂಜಿನಿಯರಿಂಗ್ ಹೊರತುಪಡಿಸಿದರೆ ನರ್ಸಿಂಗ್ ನಲ್ಲಿ ಅತಿ ಹೆಚ್ಚು ಸೀಟು ಉಳಿದಿವೆ. ಒಟ್ಟು 36,238 ಸೀಟುಗಳ ಪೈಕಿ 13,407 ಸೀಟು ಮಾತ್ರ ಹಂಚಿಕೆಯಾಗಿ, 22,832 ಸೀಟು ಹಾಗೆಯೇ ಉಳಿದಿವೆ.
ಪಶು ವೈದ್ಯಕೀಯ ಕೋರ್ಸ್ ನ ಎಲ್ಲ 366 ಸೀಟು ಹಂಚಿಕೆಯಾಗಿವೆ. ಫಾರ್ಮಸಿ ಕೋರ್ಸ್ ನ 489, ಬಿಪಿಟಿ- 22, ಕೃಷಿ ಮತ್ತು ಸಂಬಂಧಿತ ಕೋರ್ಸ್ ಗಳ 20, ಬಿಎಸ್ಸಿ ಎಎಚ್ಎಸ್ ನ 2,465 ಸೀಟು ಉಳಿದಿವೆ. ಯೋಗಾ ಮತ್ತು ನ್ಯಾಚುರೋಪತಿ ಕೋರ್ಸ್ ನ ಒಟ್ಟು 520 ಸೀಟುಗಳಲ್ಲಿ 214 ಸೀಟು ಉಳದಿವೆ.
3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವವರಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸೆ.11ರವರೆಗೆ ಅವಕಾಶ ನೀಡಲಾಗಿದೆ. ಕಡ್ಡಾಯ ಪ್ರವೇಶವಾಗಿರುವ ಕಾರಣ ಎಲ್ಲರೂ ತಪ್ಪದೆ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪ್ರಕಟಣೆ
2026ನೇ ಸಾಲಿಗೆ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಉನ್ನತ ಶಿಕ್ಷಣ ಇಲಾಖೆಯು ವಿವಿಧ ದಿನಾಂಕಗಳಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಿದ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟ್ ಮ್ಯಾಟ್ರಿಕ್ಸ್ ನಂತೆ ಸರ್ಕಾರದ ಆದೇಶ ಅನ್ವಯ ಮೊದಲ, ಎರಡನೇ ಮತ್ತು ಮೂರನೇ ಸುತ್ತಿನ ಕೌನ್ಸೆಲಿಂಗ್‌ನ್ನು (ಆನ್‌ಲೈನ್ ಸೀಟು ಹಂಚಿಕೆಯನ್ನು) ದಿನಾಂಕ 07-09-2026 ಕ್ಕೆ ಮುಕ್ತಾಯ ಗೊಳಿಸಲಾಗಿರುತ್ತದೆ. ಮೂರನೇ ಸುತ್ತಿನಲ್ಲಿ ಹಂಚಿಕೆಯಾದ ಅಭ್ಯರ್ಥಿಗಳಿಗೆ ದಿನಾಂಕ 08-09-2026 ರಿಂದ 11-09-2026 ರೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸೂಚಿಸಲಾಗಿದೆ.
ಮುಂದುವರಿದು, ಖಾಸಗಿ ಕಾಲೇಜುಗಳ ವಿವಿಧ ಒಕ್ಕೂಟ ಗಳೊಂದಿಗೆ (KUPECA, KRLMPCA, AMPCK) Consensual Agreement 3, AICTE ನಿಗದಿಪಡಿಸುವ ಕೊನೆಯ ದಿನಾಂಕದ ಹತ್ತು ದಿವಸದ ಮೊದಲು ಕೌನ್ಸಿಲಿಂಗ್ ಮುಕ್ತಾಯ ಗೊಳಿಸಿ, ಅಂತಿಮ ಸುತ್ತಿನ ಕೌನ್ಸಿಲಿಂಗ್ ನಂತರ ಹಂಚಿಕೆಯಾಗದೆ ಉಳಿಯುವ ಸೀಟುಗಳನ್ನು ಆಯಾ ಕಾಲೇಜುಗಳಿಗೆ ಹಸ್ತಾಂತರಿಸಲು ತಿಳಿಸಲಾಗಿರುತ್ತದೆ.
ಈ ಬಾರಿ ಒಟ್ಟು 24283 ಇಂಜಿನಿಯರಿಂಗ್ ಹಾಗೂ 252 ಆರ್ಕಿಟೆಕ್ಚರ್ ಸೀಟುಗಳು ಹಂಚಿಕೆಯಾಗದೇ ಉಳಿದಿರುತ್ತವೆ. ಸದರಿ ಸೀಟುಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಂಬಂಧಪಟ್ಟ ಕಾಲೇಜಿನವರು ಒಪ್ಪಂದದಂತೆ ಕ್ರಮವಹಿಸಬಹುದಾಗಿರುತ್ತದೆ.
ವೈದ್ಯಕೀಯ ಕೋರ್ಸ್
UGNEET-26: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆಯ ಎರಡನೇ ಸುತ್ತಿಗೆ ಆಪ್ಷನ್ಸ್ ಬದಲಿಸಿಕೊಳ್ಳಲು/ತೆಗೆದು ಹಾಕಲು ಸೆ.10ರಂದು ಬೆಳಿಗ್ಗೆ 9.30ರವರೆಗೆ ದಿನಾಂಕ ಅವಕಾಶ ನೀಡಲಾಗಿದೆ.
ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಕಾಲೇಜು ಹೊಸದಾಗಿ ಆರಂಭವಾಗುತ್ತಿದ್ದು ಈ ಕಾಲೇಜಿನಲ್ಲಿ 100 ಸೀಟು ಲಭ್ಯವಾಗಿವೆ. ಇದು ಹೊಸ ಕಾಲೇಜಾಗಿರುವ ಕಾರಣ ಆ ಕಾಲೇಜಿಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ.
ಎರಡನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಲಾಗಿನ್ ಆಗಿ ಒಪ್ಪಿಗೆ ಸೂಚಿಸಬೇಕು. ಆಪ್ಷನ್ಸ್ ಅದಲು- ಬದಲು ಮಾಡಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಚಾಯ್ಸ್-2 ಮತ್ತು ಚಾಯ್ಸ್-3 ಆಯ್ಕೆ ಮಾಡಿರುವವರು ಹಾಗೂ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು.

