ಉದ್ಯೋಗ ನಿಧಿ ಯೋಜನೆ: ಕರ್ನಾಟಕದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಕಡಿಮೆ ಅಭಿವೃದ್ಧಿ ಹೊಂದಿರುವ 11 ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ ‘ಉದ್ಯೋಗ ನಿಧಿ’ ಯೋಜನೆ ಪ್ರಸ್ತಾಪಿಸಲಾಗಿದೆ.
ಈ ಯೋಜನೆಯಡಿ ಅರ್ಹ MSMEಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ನೇಮಕ ಮಾಡಿಕೊಳ್ಳುವ ಪ್ರತಿ ಹೆಚ್ಚುವರಿ ಕಾರ್ಮಿಕರಿಗೆ ತಿಂಗಳಿಗೆ ₹2,500ರಂತೆ, ಗರಿಷ್ಠ 24 ತಿಂಗಳವರೆಗೆ ಪ್ರೋತ್ಸಾಹಧನ ಪಡೆಯಲಿವೆ. ವಾರ್ಷಿಕ ₹305 ಕೋಟಿ ವೆಚ್ಚದ ಈ ಯೋಜನೆಯಡಿ, ಉದ್ಯೋಗ ಸೃಷ್ಟಿ ಹಾಗೂ ವೇತನ ಪಾವತಿಗಳನ್ನು ಪರಿಶೀಲಿಸಿ ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಿಂದ ಉದ್ಯೋಗಗಳನ್ನು ಸೃಷ್ಟಿಸಿ, ಅವುಗಳನ್ನು ನಿರಂತರವಾಗಿ ಉಳಿಸಿಕೊಳ್ಳುವ ಉದ್ಯಮಗಳಿಗೆ ಮಾತ್ರ ಯೋಜನೆಯ ಪ್ರಯೋಜನ ತಲುಪಲಿದೆ.
ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಹಾಗೂ ಬಾಗಲಕೋಟೆ ಸೇರಿದಂತೆ 11 ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲು ಮತ್ತು ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ಈ ಯೋಜನೆ ಉತ್ತೇಜನ ನೀಡಲಿದೆ. ‘ಯುವ ನಿಧಿ’ ಯೋಜನೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಯುವಜನರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಹೂಡಿಕೆ ಮತ್ತು ಉದ್ಯೋಗಗಳನ್ನು ಯುವಜನರ ಮನೆಬಾಗಿಲಿಗೆ ತರುವುದು ನಮ್ಮ ಆದ್ಯತೆ. ತಮ್ಮದೇ ಪ್ರದೇಶದಲ್ಲಿ ಉತ್ತಮ ಅವಕಾಶಗಳನ್ನು ಪಡೆದು, ತಮ್ಮ ಭವಿಷ್ಯವನ್ನು ತಾವೇ ಕಟ್ಟಿಕೊಳ್ಳಲು ರಾಜ್ಯದ ಯುವಜನರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ನಮ್ಮ ಸಂಕಲ್ಪ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿನೂತನ ಜನಸ್ನೇಹಿ ಕಾರ್ಯಕ್ರಮ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿ ನೂರು ದಿನಗಳಾದ ಈ ಸುಸಂದರ್ಭದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ಸಂಕಲ್ಪದೊಂದಿಗೆ ಹಲವು ಮಹತ್ವದ ಪ್ರಗತಿಯ ಹೆಜ್ಜೆಗಳನ್ನು ಇರಿಸಲಾಗಿದ್ದು, ವಿನೂತನ ಜನಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಹೊಸ ಚೈತನ್ಯದೊಂದಿಗೆ, ಹೊಸ ಉತ್ಸಾಹದೊಂದಿಗೆ, ಹೊಸ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿರುವ ನಮ್ಮ ಸರ್ಕಾರವು ಮಣ್ಣಿನ ಮಕ್ಕಳ ನೆರವಿಗೆ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಕಾರ್ಯಕ್ರಮ, ಶೈಕ್ಷಣಿಕ ಬಲವರ್ಧನೆಗೆ ಉಚಿತ ಬಸ್ ಪಾಸ್, ‘ಸಿಎಂ ವಿದ್ಯಾರ್ಥಿ ಹಸ್ತ’ದಂತಹ ಉತ್ತೇಜನಾತ್ಮಕ ಕಾರ್ಯಕ್ರಮ, ಯುವ ಸಬಲೀಕರಣಕ್ಕೆ ಉದ್ಯೋಗ ನಿಧಿ, ಭಾರತ್ ಜೋಡೋ ಸಂಘ, ತಂತ್ರಜ್ಞಾನ ಕ್ಷೇತ್ರದ ನಾಯಕತ್ವಕ್ಕಾಗಿ ಎಐ ವಿಶ್ವವಿದ್ಯಾಲಯ, ಗ್ಲೋಬಲ್ ಟೆಕ್ನಾಲಜಿ ಸೆಂಟರ್‌ಗಳು, ರಾಜ್ಯದ ಪ್ರಗತಿಗೆ ವೇಗ ನೀಡಲು ಉತ್ಪಾದನಾ ಕ್ಲಸ್ಟರ್‌ಗಳು, ಬಿಯಾಂಡ್ ಬೆಂಗಳೂರಿನಂತಹ ಕಾರ್ಯಕ್ರಮಗಳು, ಜನಸ್ಪಂದನೆಗಾಗಿ ಪ್ರಜಾಸೇವಾ ಕಾರ್ಯಕ್ರಮ- ಹೀಗೆ ಸರ್ವರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಗಾಗಿ ನೂರು ದಿನಗಳಲ್ಲಿ ನೂರಾರು ಪ್ರಗತಿಯ ಹೆಜ್ಜೆಗಳನ್ನು ಇಡಲಾಗಿದೆ.
ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ರಾಜ್ಯದ ಗೃಹ ಇಲಾಖೆಯು #RISE ಕರ್ನಾಟಕ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಾದಕವಸ್ತುಗಳ ಪಿಡುಗಿನ ವಿರುದ್ಧ ಸಮರ ಸಾರಲಾಗಿದೆ. #ಬೇಡBRO ಎಂಬ ಜಾಗೃತಿಯ ಅಭಿಯಾನದ ಮೂಲಕ ಮಾದಕವಸ್ತುಗಳ ವಿರುದ್ಧ ಕಾರ್ಯಾಚರಣೆಗೆ ವಿಶೇಷ ಒತ್ತು ನೀಡಲಾಗಿದೆ.
2026ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ 1,999 NDPS ಪ್ರಕರಣಗಳನ್ನು ದಾಖಲಿಸಿ, 807 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.
ಸೈಬರ್ ವಂಚನೆಗೆ ಒಳಗಾದವರ ನೆರವಿಗಾಗಿ ವಿಶೇಷ ಸಹಾಯವಾಣಿ ತೆರೆಯಲಾಗಿದೆ. ಸಂಚಾರ ದಟ್ಟಣೆಯ ನಿರ್ವಹಣೆಗಾಗಿ ವಿಶೇಷ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆಗಳನ್ನು ರಚಿಸಲಾಗುತ್ತಿದ್ದು, ಸ್ವಸ್ಥ ಮತ್ತು ಭಯಮುಕ್ತ ವಾತಾವರಣವನ್ನು ಖಾತರಿಪಡಿಸಲಾಗುವುದು.
ಭಾರತದ ಮೊದಲ ಎಐ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. AI ಶಿಕ್ಷಣ, AI ನೀತಿ, AI ಹಬ್, ಗ್ರೀನ್ ಡೇಟಾ ಸೆಂಟರ್ ನೀತಿ, ಡ್ರೋನ್ ಉನ್ನತಿ ಕೇಂದ್ರ, ಇವಿ ಉನ್ನತಿ ಕೇಂದ್ರಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವಂತಹ ಕಾರ್ಯಕ್ರಮಗಳಾಗಿವೆ. ನಮ್ಮ ಸರ್ಕಾರದ ನೂರು ದಿನಗಳ ಈ ಸಾಧನೆಗಳು ಮುಂದಿನ ದಿನಗಳಲ್ಲಿ ಇಮ್ಮಡಿಯಾದ ವೇಗದೊಂದಿಗೆ ಮುನ್ನಡೆಯಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

