ಉಡುಪಿ: ಸಾವು ಎಷ್ಟೊತ್ತಿಗೆ ಹೇಗೆ ಬರುತ್ತದೆ ಎಂಬುದರ ಸಣ್ಣ ಸುಳಿವೂ ಇರುವುದಿಲ್ಲ. ಯಾತ್ರಾರ್ಥಿಯೊಬ್ಬರು ವಸತಿ ಗೃಹದಲ್ಲಿ ಕುರ್ಚಿಯಲ್ಲಿ ಕುಳಿತಿದ್ದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಹಳೆ ಬಸ್ ನಿಲ್ದಾಣದ ಬಳಿ ಇರುವ ವಸತಿ ಗೃಹದಲ್ಲಿ ಈ ಘಟನೆ ನಡೆದಿದೆ. ಎಷ್ಟು ಹೊತ್ತಾದರೂ ವ್ಯಕ್ತಿ ಹೊರ ಬಾರದಿರುವುದನ್ನು ಗಮನಿಸಿದ ವಸತಿಗೃಹದ ಸಿಬ್ಬಂದಿ, ರೂಮಿಗೆ ಹೋಗಿ ಬಾಗಿಲು ತೆರೆದು ನೋಡಿದಾಗ ಶಾಕ್ ಆಗಿದ್ದಾರೆ.
ವ್ಯಕ್ತಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದರು. ಮೃತರನ್ನು ದಾವಣಗೆರೆ ನಿವಾಸಿ ಮಹಾಂತೇಶ್ ಎಂ.ಜಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಬಂದಿದ್ದರೆಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಉಡುಪಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅನಾರೋಗ್ಯದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

