ಮಹಾರಾಷ್ಟ್ರ ರಾಜ್ಯದ ರಾಜಕೀಯದಲ್ಲಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಸಂಚಲನ ಮೂಡಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿರುವಾಗ ಸಹೋದರರು 20 ವರ್ಷಗಳ ಬಳಿಕ ಒಂದಾಗಿದ್ದು, ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ.
2024ರ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ರಾಜ್ಯಕ್ಕಾಗಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಒಂದಾಗುವ ಮಾತುಗಳು ಕೇಳಿ ಬಂದಿದ್ದವು. ಈಗ ಅದು ನಿಜವಾಗಿದ್ದು, ಉಭಯ ನಾಯಕರು ಒಟ್ಟಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರು ಒಂದಾಗಿದ್ದು, ರಾಜ್ಯದ ಹೊಸ ರಾಜಕೀಯ ಬೆಳವಣಿಗೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಮಹಾಯತಿ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗುವ ನಿರೀಕ್ಷೆ ಇದೆ.
ಚುನಾವಣೆ ಸೋಲು: ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಮೂರು ಪಕ್ಷಗಳು ‘ಮಹಾಯುತಿ’ ಮೈತ್ರಿಕೂಟದಲ್ಲಿವೆ. ಈ ಮೈತ್ರಿಕೂಟವೇ ಸದ್ಯ ರಾಜ್ಯದ ಆಡಳಿತ ಪಕ್ಷವಾಗಿದೆ. ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡ್ನವೀಸ್.
ವಿರೋಧ ಪಕ್ಷಗಳು ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್ ಬಣ) ಈ ಮೈತ್ರಿಕೂಟದಲ್ಲಿವೆ. ಆದರೆ ಮೈತ್ರಿಕೂಟಕ್ಕೆ 2024ರ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆ ಉಂಟಾಗಿತ್ತು. ರಾಜ್ ಠಾಕ್ರೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು.
ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ ಎಂದು ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಈಗ ಘೋಷಣೆ ಮಾಡಿದ್ದಾರೆ.
ಉದ್ಧವ್ ಠಾಕ್ರೆ ಮಾತನಾಡಿ, “ಮಹಾರಾಷ್ಟ್ರದ ನಾಯಕತ್ವ ಠಾಕ್ರೆ ಕುಟುಂಬಕ್ಕೆ ಸೇರಿದ್ದು, ಠಾಕ್ರೆಗಳು ಮಾತ್ರ ಮಹಾರಾಷ್ಟ್ರವನ್ನು ಮುನ್ನಡೆಸಲು ಸಾಧ್ಯ” ಎಂದು ಹೇಳಿದ್ದಾರೆ. ರಾಜ್ ಮತ್ತು ಉದ್ಧವ್ ಠಾಕ್ರೆ ಒಂದಾಗಿರುವ ಕಾರಣ ಮಹಾನಗರ ಪಾಲಿಕೆ ಚುನಾವಣೆ ಕುರಿತು ಹೊಸ ಲೆಕ್ಕಾಚಾರ ಪ್ರಾರಂಭವಾಗಿದೆ.
ಶಿವಸೇನೆ ನಾಯಕ ಸಂಜಯ್ ರಾವತ್ ಮಾತನಾಡಿ, “ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಒಂದಾಗಿರುವುದು ಐತಿಹಾಸಿಕ ಸಂಗತಿ. ಈ ಘಳಿಗೆಗಾಗಿ ರಾಜ್ಯದ ಜನರ ಎದುರು ನೋಡುತ್ತಿದ್ದರು. ಜನರ ಉತ್ಸಾಹ, ಉಪಸ್ಥಿತಿ ನೋಡಿದರೆ ಇದೊಂದು ಐತಿಹಾಸಿಕ ದಿನ ಎಂದು ತಿಳಿಯುತ್ತದೆ” ಎಂದರು.
2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳಲ್ಲಿ ಜಯಗಳಿಸಿದ್ದವು. ಮೂರು ಪಕ್ಷಗಳು ಸೇರಿರುವ ‘ಮಹಾಯುತಿ’ ಮೈತ್ರಿಕೂಟದ ಸರ್ಕಾರ ರಚನೆಯಾಗಿತ್ತು.
ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೇ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಸ್ವತಂತ್ರವಾಗಿ ಕಣಕ್ಕಿಳಿದಿತ್ತು. ಆದರೆ ಒಂದು ಸೀಟು ಗೆಲ್ಲಲು ವಿಫಲವಾಗಿತ್ತು. ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ಸಹ ಸೋಲು ಕಂಡಿದ್ದರು.
ಅತ್ತ ಚುನಾವಣೆಯ ಬಳಿಕ ಕಾಂಗ್ರೆಸ್ ಜೊತೆಗಿನ ಸಖ್ಯ ತೊರೆಯುವ ಸೂಚನೆಯನ್ನು ಉದ್ಧವ್ ಠಾಕ್ರೆ ನೀಡಿದ್ದರು. ಈಗ ರಾಜ್ ಮತ್ತು ಉದ್ಧವ್ ಒಂದಾಗಿದ್ದಾರೆ. “ಈ ಮೈತ್ರಿ ಕೇವಲ ಮುಂಬೈ ಚುನಾವಣೆಗೆ ಸೀಮಿತವಾಗಿಲ್ಲ, ಚುನಾವಣೆ ಬಳಿಕವೂ ಮುಂದುವರೆಯಲಿದೆ” ಎಂದು ಉದ್ಧವ್ ಠಾಕ್ರೆ ಘೋಷಣೆ ಮಾಡಿದ್ದಾರೆ.
ಉದ್ಧವ್ ಠಾಕ್ರೆ, “ಮೈತ್ರಿಕೂಟದಲ್ಲಿ ಏನಾಗುತ್ತಿದೆ? ಎಂಬುದು ತಿಳಿಯದ ನಾಯಕರು ಸಹ ನಮ್ಮ ಜೊತೆ ಬರಬಹುದು” ಎಂದು ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.

